ವೇದಿಕೆ ಶುದ್ಧೀಕರಣ ಆರೋಪ: ಖರ್ಗೆ ಅವರಿಗೆ ಅವಮಾನ, ಉನ್ನತ ಮಟ್ಟದ ತನಿಖೆಗೆ ಲಚ್ಚಪ್ಪ ಜಮಾದಾರ ಆಗ್ರಹ

ಕಲಬುರಗಿ: ಉತ್ತರಾಖಂಡದ ಹಲದ್ವಾನಿಯಲ್ಲಿ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಿದ್ದ ಕಾರ್ಯಕ್ರಮದ ಬಳಿಕ ವೇದಿಕೆಯನ್ನು ‘ಶುದ್ಧೀಕರಿಸಲಾಗಿದೆ’ ಎಂಬುದಾಗಿ ವರದಿಯಾಗಿರುವ ಘಟನೆ ಅತ್ಯಂತ ಅಮಾನವೀಯ ಹಾಗೂ ಅವಮಾನಕಾರಿ. ಇದು ಸಾಮಾಜಿಕ ನ್ಯಾಯದ ಮೌಲ್ಯಗಳಿಗೆ ವಿರುದ್ಧವಾದ ಕೃತ್ಯ ಎಂದು ಕೋಲಿ ಕಬ್ಬಲಿಗ ಎಸ್‌ಟಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಲಚ್ಚಪ್ಪ ಜಮಾದಾರ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ವೇದಿಕೆಯನ್ನು ಶುದ್ಧೀಕರಿಸಲಾಗಿದೆ ಎಂಬ ವರದಿ ತೀವ್ರ ಖಂಡನೀಯವಾಗಿದೆ. ಈ ಘಟನೆ ಕೇವಲ ಖರ್ಗೆ ಅವರಿಗೆ ಮಾಡಿದ ಅವಮಾನವಲ್ಲ. ದೇಶದ ದಲಿತ ಹಾಗೂ ಶೋಷಿತ ಸಮುದಾಯಗಳ ಆತ್ಮಗೌರವಕ್ಕೆ ಧಕ್ಕೆ ತರುವಂತಹದ್ದು ಎಂದು ಹೇಳಿದರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಪಾದಿಸಿದ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಮಾನವ ಘನತೆಯ ಮೌಲ್ಯಗಳಿಗೆ ಇಂತಹ ಘಟನೆಗಳು ವಿರುದ್ಧವಾಗಿವೆ. ಸಮಾಜದಲ್ಲಿ ಜಾತಿ ಆಧಾರಿತ ತಾರತಮ್ಯಕ್ಕೆ ಯಾವುದೇ ಅವಕಾಶ ಇರಬಾರದು ಎಂದು ಅವರು ಹೇಳಿದರು.
ಘಟನೆಯ ನೈಜ ಹಿನ್ನೆಲೆ ಏನು, ಕಾರ್ಯಕ್ರಮದ ಆಯೋಜಕರು ಯಾರು, ಘಟನೆಗೆ ಹೊಣೆಗಾರರು ಯಾರು ಹಾಗೂ ಯಾರ ಸೂಚನೆಯ ಮೇರೆಗೆ ಈ ಕೃತ್ಯ ನಡೆದಿದೆ ಎಂಬುದನ್ನು ಪತ್ತೆಹಚ್ಚಬೇಕು. ಈ ಕುರಿತು ನಿಷ್ಪಕ್ಷಪಾತ ಹಾಗೂ ಉನ್ನತ ಮಟ್ಟದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನುಬದ್ಧವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಲಚ್ಚಪ್ಪ ಜಮಾದಾರ ಒತ್ತಾಯಿಸಿದರು.



