ಕೃಷಿ ಸಂಶೋಧನಾ ಜಮೀನು ಆಸ್ಪತ್ರೆ ನಿರ್ಮಾಣಕ್ಕೆ ನೀಡಲು ಯತ್ನ: ಸರ್ಕಾರ, ಜಿಲ್ಲಾಡಳಿತದ ವಿರುದ್ಧ ಆಕ್ರೋಶ

ಕಲಬುರಗಿ: ಕೃಷಿ ಸಂಶೋಧನೆ ಮತ್ತು ಬೀಜೋತ್ಪಾದನೆಗೆ ಮೀಸಲಾಗಿರುವ ಕಲಬುರಗಿ ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ) ಹಾಗೂ ಕೃಷಿ ಸಂಶೋಧನಾ ಕೇಂದ್ರದ ಜಮೀನನ್ನು ಆಸ್ಪತ್ರೆ ನಿರ್ಮಾಣಕ್ಕಾಗಿ ಹಸ್ತಾಂತರಿಸಲು ಮುಂದಾಗಿರುವ ಸರ್ಕಾರ ಹಾಗೂ ಜಿಲ್ಲಾಡಳಿತದ ಕ್ರಮದ ವಿರುದ್ಧ ಕರ್ನಾಟಕ ನವನಿರ್ಮಾಣ ಸೇನೆ ತೀವ್ರ ಆಕ್ರೋಶ ವ್ಯಕ್ತಪಡಿಸಿತು.
ಸರ್ಕಾರ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಕೃಷಿ ಸಂಶೋಧನೆಗೆ ಮೀಸಲಾಗಿರುವ ಫಲವತ್ತಾದ ಜಮೀನಿನ ಮಹತ್ವವನ್ನು ಕಡೆಗಣಿಸಿ, ಬೇರೆ ಉದ್ದೇಶಕ್ಕೆ ಬಳಸಲು ಮುಂದಾಗಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸೇನೆಯ ಜಿಲ್ಲಾಧ್ಯಕ್ಷ ರವಿ ಎನ್. ದೇಗಾಂವ ಅವರ ನೇತೃತ್ವದಲ್ಲಿ ಬುಧವಾರ ನಡೆದ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಸರ್ಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಗಾಂಧಿ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೆ ಮೆರವಣಿಗೆ ನಡೆಸಿ, ಜಮೀನು ಹಸ್ತಾಂತರಿಸುವ ಪ್ರಸ್ತಾವವನ್ನು ತಕ್ಷಣ ಕೈಬಿಡುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.
‘ರೈತರ ಭವಿಷ್ಯಕ್ಕೆ ಸಂಬಂಧಿಸಿದ ಜಮೀನನ್ನು ಆಸ್ಪತ್ರೆಗಾಗಿ ಕಸಿದುಕೊಳ್ಳಲು ಬಿಡುವುದಿಲ್ಲ’ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಕಲಬುರಗಿ ಕೃಷಿ ಸಂಶೋಧನಾ ಕೇಂದ್ರವು ಕಳೆದ 34 ವರ್ಷಗಳಿಂದ ವಿವಿಧ ಸಸ್ಯ ರೋಗಗಳು ಹಾಗೂ ಕೃಷಿ ಸಂಬಂಧಿತ ವಿಷಯಗಳ ಕುರಿತು ಸಂಶೋಧನೆ ನಡೆಸುತ್ತಿದ್ದು, ಕೃಷಿ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದೆ. ದೇಶಕ್ಕೆ 11ಕ್ಕೂ ಹೆಚ್ಚು ಶ್ರೇಷ್ಠ ತೊಗರಿ ತಳಿಗಳನ್ನು ನೀಡಿರುವ ಕೇಂದ್ರವು ಸಾವಿರಾರು ರೈತರಿಗೆ ತರಬೇತಿ ನೀಡುವುದರ ಜತೆಗೆ ನೂರಾರು ಕೃಷಿ ವಿದ್ಯಾರ್ಥಿಗಳ ಪ್ರಾಯೋಗಿಕ ಶಿಕ್ಷಣಕ್ಕೂ ಪ್ರಮುಖ ಆಧಾರವಾಗಿದೆ ಎಂದು ಅವರು ಹೇಳಿದರು.
ಇಂತಹ ಮಹತ್ವದ ಸಂಶೋಧನಾ ಕೇಂದ್ರದ ಫಲವತ್ತಾದ ಜಮೀನನ್ನು ಬೇರೆ ಉದ್ದೇಶಕ್ಕೆ ಬಳಸಲು ಮುಂದಾಗಿರುವುದು ಕೃಷಿ ಸಂಶೋಧನೆ, ಬೀಜೋತ್ಪಾದನೆ, ವಿದ್ಯಾರ್ಥಿಗಳ ಪ್ರಾಯೋಗಿಕ ಶಿಕ್ಷಣ ಹಾಗೂ ರೈತರ ತರಬೇತಿಗೆ ಗಂಭೀರ ಹೊಡೆತ ನೀಡಲಿದೆ. ಒಮ್ಮೆ ಈ ಜಮೀನು ಬೇರೆ ಉದ್ದೇಶಕ್ಕೆ ಹಸ್ತಾಂತರವಾದರೆ, ಇಂತಹ ಸಂಶೋಧನಾ ವ್ಯವಸ್ಥೆಯನ್ನು ಮತ್ತೊಮ್ಮೆ ನಿರ್ಮಿಸಲು ಹಲವು ವರ್ಷಗಳು ಬೇಕಾಗಬಹುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಆಸ್ಪತ್ರೆ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ; ಆದರೆ ಕೃಷಿ ಸಂಶೋಧನೆಗೆ ಮೀಸಲಾದ ಜಮೀನನ್ನು ಬಲಿಕೊಟ್ಟು ಆಸ್ಪತ್ರೆ ನಿರ್ಮಿಸುವುದನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ನಗರದಲ್ಲಿ ಲಭ್ಯವಿರುವ ಪರ್ಯಾಯ ಸರ್ಕಾರಿ ಜಮೀನುಗಳನ್ನು ಗುರುತಿಸಿ ಆಸ್ಪತ್ರೆ ನಿರ್ಮಾಣಕ್ಕೆ ಬಳಸಬೇಕು. ಕೃಷಿ ಸಂಶೋಧನೆಗೆ ಮೀಸಲಾದ ಜಮೀನಿನ ಮೇಲೆ ಕಣ್ಣು ಹಾಕುವುದನ್ನು ಸರ್ಕಾರ ಮತ್ತು ಜಿಲ್ಲಾಡಳಿತ ಕೈಬಿಡಬೇಕು. ಜನಪ್ರತಿನಿಧಿಗಳು ಕೂಡ ಈ ವಿಚಾರದಲ್ಲಿ ಸ್ಪಷ್ಟ ನಿಲುವು ಪ್ರಕಟಿಸಬೇಕು ಎಂದು ಆಗ್ರಹಿಸಿದರು.
ಕೃಷಿ ಸಂಶೋಧನಾ ಕೇಂದ್ರದ ಜಮೀನು ಹಸ್ತಾಂತರಿಸುವ ಪ್ರಸ್ತಾವವನ್ನು ಹಿಂಪಡೆಯದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಪ್ರಶಾಂತ ಮಠಪತಿ, ಸಂತೋಷ ಪಾಟೀಲ, ವಿಕಾಸ ಚವ್ಹಾಣ, ಋಶಿ ಬೆನಕನಳ್ಳಿ, ಸಂತೋಷ ಕೆರೂರ, ಭೀಮಾಶಂಕರ ಕೊರವಿ, ಮಡಿವಾಳ ಲಿಂಬಿತೋಟ, ಮಲ್ಲಿಕಾರ್ಜುನ ಜಮಾದಾರ, ಈಶ್ವರ ಹೇರೂರ, ಜಗದೀಶ ಜಮಾದಾರ, ಮಂಜು ಕಡಗಂಚಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.


