ತುರ್ತು ಸಂದರ್ಭದಲ್ಲಿ ಜೀವ ಉಳಿಸಿದ ಕೆಂಭಾವಿ CHC ಸಿಬ್ಬಂದಿ: ಸಾರ್ವಜನಿಕರ ಮೆಚ್ಚುಗೆ

“ನಮ್ಮ ಕೇಂದ್ರದಲ್ಲಿ ತಜ್ಞ ಶಸ್ತ್ರಚಿಕಿತ್ಸಕರ ಕೊರತೆ ಇರುವುದು ನಿಜ. ಆದರೆ ತುರ್ತು ಪರಿಸ್ಥಿತಿಯಲ್ಲಿ ಬರುವ ಯಾವುದೇ ರೋಗಿಯನ್ನು ನಿರ್ಲಕ್ಷಿಸದೆ, ನಮ್ಮಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ತಕ್ಷಣವೇ ಜೀವ ರಕ್ಷಕ ಪ್ರಥಮ ಚಿಕಿತ್ಸೆ ನೀಡುತ್ತಿದ್ದೇವೆ. ಹೆಚ್ಚಿನ ಶಸ್ತ್ರಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನು ಪ್ರಾಥಮಿಕವಾಗಿ ಚೇತರಿಸಿಕೊಳ್ಳುವಂತೆ ಮಾಡಿ, ಆಂಬುಲೆನ್ಸ್ ಮೂಲಕ ಸುಸಜ್ಜಿತ ಜಿಲ್ಲಾ ಆಸ್ಪತ್ರೆಗೆ ಸುರಕ್ಷಿತವಾಗಿ ರವಾನಿಸಲಾಗುತ್ತಿದೆ.” – ಡಾ.ಸಚಿನ್ ಧೋತ್ರೆ, ಮಧುಮೇಹ ಮತ್ತು ಹೃದ್ರೋಗ ತಜ್ಞರು, ಸಮುದಾಯ ಆರೋಗ್ಯ ಕೇಂದ್ರ, ಕೆಂಭಾವಿ.
ಕೆಂಭಾವಿ: ಗಂಭೀರ ಗಾಯಗಳಿಂದ ತೀವ್ರ ರಕ್ತಸ್ರಾವವಾಗಿ ಪ್ರಾಣಾಪಾಯದ ಸ್ಥಿತಿಯಲ್ಲಿದ್ದ ಇಬ್ಬರು ರೋಗಿಗಳಿಗೆ ಕೆಂಭಾವಿ ಸಮುದಾಯ ಆರೋಗ್ಯ ಕೇಂದ್ರದ (CHC) ಸಿಬ್ಬಂದಿ ಸಮಯಪ್ರಜ್ಞೆಯಿಂದ ತುರ್ತು ಚಿಕಿತ್ಸೆ ನೀಡಿ ಜೀವ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ಇತ್ತೀಚೆಗೆ ಕುತ್ತಿಗೆಗೆ ತೀವ್ರ ಗಾಯವಾಗಿ ಅಧಿಕ ರಕ್ತಸ್ರಾವದಿಂದ ಬಳಲುತ್ತಿದ್ದ ಯುವತಿ ಹಾಗೂ ಕಾಲಿಗೆ ಆಳವಾದ ಗಾಯವಾಗಿದ್ದ ಮತ್ತೊಬ್ಬರು ತುರ್ತು ಸ್ಥಿತಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದರು. ಕುತ್ತಿಗೆಯ ಭಾಗದಲ್ಲಿ ಪ್ರಮುಖ ರಕ್ತನಾಳಗಳಿರುವುದರಿಂದ ವಿಳಂಬವಾದರೆ ಗಂಭೀರ ಅಪಾಯ ಎದುರಾಗುವ ಸಾಧ್ಯತೆ ಇತ್ತು.
ಈ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಸ್ಟಾಫ್ ನರ್ಸ್ ಸಮೀರ್ ಅಹ್ಮದ್ ಅವರು ವೈದ್ಯರ ಮಾರ್ಗದರ್ಶನದಲ್ಲಿ ತಕ್ಷಣ ರಕ್ತಸ್ರಾವ ನಿಯಂತ್ರಿಸಿ, ಗಾಯಗಳಿಗೆ ಸೂಕ್ತವಾಗಿ ಹೊಲಿಗೆ ಹಾಕಿ ರೋಗಿಗಳ ಸ್ಥಿತಿ ಸ್ಥಿರಗೊಳಿಸುವಲ್ಲಿ ಯಶಸ್ವಿಯಾದರು. ಅವರ ಸಮಯಪ್ರಜ್ಞೆ, ಧೈರ್ಯ ಹಾಗೂ ಕರ್ತವ್ಯನಿಷ್ಠೆಗೆ ವೈದ್ಯಾಧಿಕಾರಿಗಳು ಮತ್ತು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಜ್ಞ ಶಸ್ತ್ರಚಿಕಿತ್ಸಕರ ಹುದ್ದೆ ಖಾಲಿ ಇದ್ದರೂ ಸೇವೆ
ಕೆಂಭಾವಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಜ್ಞ ಶಸ್ತ್ರಚಿಕಿತ್ಸಕರ ಹುದ್ದೆ ಖಾಲಿ ಇದ್ದರೂ, ತುರ್ತು ಸಂದರ್ಭಗಳಲ್ಲಿ ಕರ್ತವ್ಯನಿರತ ವೈದ್ಯರು ಹಾಗೂ ನರ್ಸಿಂಗ್ ಸಿಬ್ಬಂದಿ ಗಾಯಾಳುಗಳಿಗೆ ಅಗತ್ಯ ಪ್ರಾಥಮಿಕ ಚಿಕಿತ್ಸೆ ನೀಡುವ ಮೂಲಕ ಜೀವ ರಕ್ಷಣೆಗೆ ಶ್ರಮಿಸುತ್ತಿದ್ದಾರೆ.
ಗ್ರಾಮೀಣ ಪ್ರದೇಶಗಳಿಂದ ಬರುವ ರಸ್ತೆ ಅಪಘಾತ, ಕೃಷಿ ಚಟುವಟಿಕೆಗಳ ವೇಳೆ ಸಂಭವಿಸುವ ಅವಘಡ ಹಾಗೂ ವಿವಿಧ ಗಂಭೀರ ಗಾಯಗಳ ಪ್ರಕರಣಗಳಲ್ಲಿ ರಕ್ತಸ್ರಾವ ನಿಯಂತ್ರಿಸುವುದು, ಹೊಲಿಗೆ ಹಾಕುವುದು, ನೋವು ನಿವಾರಕ ಚಿಕಿತ್ಸೆ ನೀಡುವುದು ಮತ್ತು ರೋಗಿಯ ಸ್ಥಿತಿಯನ್ನು ಸ್ಥಿರಗೊಳಿಸುವ ಕಾರ್ಯಗಳನ್ನು ಸಿಬ್ಬಂದಿ ಸಮರ್ಪಕವಾಗಿ ನಿರ್ವಹಿಸುತ್ತಿದ್ದಾರೆ.
ಸರ್ಕಾರಿ ಆಸ್ಪತ್ರೆಯ ಮೇಲಿನ ವಿಶ್ವಾಸ ಹೆಚ್ಚಳ
ಗ್ರಾಮೀಣ ಭಾಗದ ಆಸ್ಪತ್ರೆಗಳಲ್ಲಿ ಗಂಭೀರ ಗಾಯಗಳ ತುರ್ತು ಚಿಕಿತ್ಸೆಯನ್ನು ನಿರ್ವಹಿಸುವುದು ಸವಾಲಿನ ಕೆಲಸ. ಆದರೂ ಕೆಂಭಾವಿ CHCಯ ಅನುಭವಿ ವೈದ್ಯರು ಮತ್ತು ತರಬೇತಿ ಪಡೆದ ಸಿಬ್ಬಂದಿ ತುರ್ತು ಪರಿಸ್ಥಿತಿಯಲ್ಲಿ ತ್ವರಿತವಾಗಿ ಸ್ಪಂದಿಸುತ್ತಿರುವುದು ಸಾರ್ವಜನಿಕರಲ್ಲಿ ಸರ್ಕಾರಿ ಆರೋಗ್ಯ ಸೇವೆಯ ಮೇಲಿನ ವಿಶ್ವಾಸ ಹೆಚ್ಚಲು ಕಾರಣವಾಗಿದೆ.
ಸ್ಟಾಫ್ ನರ್ಸ್ ಸಮೀರ್ ಅಹ್ಮದ್ ಅವರ ಕರ್ತವ್ಯಪರತೆ ಮತ್ತು ಸಮಯಪ್ರಜ್ಞೆಯನ್ನು ಆಸ್ಪತ್ರೆಯ ವೈದ್ಯಾಧಿಕಾರಿಗಳು ಶ್ಲಾಘಿಸಿದ್ದಾರೆ. ರೋಗಿಗಳ ಕುಟುಂಬಸ್ಥರು ಹಾಗೂ ಸ್ಥಳೀಯ ಸಾರ್ವಜನಿಕರೂ ಸಿಬ್ಬಂದಿಯ ಮಾನವೀಯ ಸೇವೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಸಾರ್ವಜನಿಕರ ಮೆಚ್ಚುಗೆ ಹಾಗೂ ಮನವಿ. ಸೀಮಿತ ಸಂಪನ್ಮೂಲಗಳ ನಡುವೆಯೂ ಹಗಲಿರುಳು ಶ್ರಮಿಸುತ್ತಿರುವ ಆಸ್ಪತ್ರೆ ಸಿಬ್ಬಂದಿಯ ಕರ್ತವ್ಯ ಪ್ರಜ್ಞೆಗೆ ಕೆಂಭಾವಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ಬಡ ಹಾಗೂ ಮಧ್ಯಮ ವರ್ಗದ ಜನರ ತುರ್ತು ಆರೋಗ್ಯ ರಕ್ಷಣೆಗಾಗಿ ಆರೋಗ್ಯ ಇಲಾಖೆ ತಕ್ಷಣವೇ ಗಮನಹರಿಸಿ ಖಾಲಿ ಇರುವ ಶಸ್ತ್ರಚಿಕಿತ್ಸಕರ ಹುದ್ದೆಯನ್ನು ಶೀಘ್ರವಾಗಿ ಭರ್ತಿ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.



