ಜವಾಬ್ದಾರಿ, ಸನ್ಮಾನಗಳು ಬೆಳವಣಿಗೆಗೆ ಪ್ರೇರಣೆ: ಕಾಶಿನಾಥ ಗುತ್ತೇದಾರ

ಚಿತ್ತಾಪುರ: ಜವಾಬ್ದಾರಿಗಳು ಹಾಗೂ ಸನ್ಮಾನಗಳು ಮನುಷ್ಯನ ವ್ಯಕ್ತಿತ್ವ ಮತ್ತು ಬೆಳವಣಿಗೆಗೆ ಪ್ರೇರಣೆ ನೀಡುತ್ತವೆ ಎಂದು ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ಅಧ್ಯಕ್ಷ ಕಾಶಿನಾಥ ಗುತ್ತೇದಾರ ಹೇಳಿದರು.
ನಾಗಾವಿ ಎಕ್ಸ್ಪ್ರೆಸ್ ಕಾರ್ಯಾಲಯದಲ್ಲಿ ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ವತಿಯಿಂದ ಭಾನುವಾರ ಆಯೋಜಿಸಿದ್ದ ಅಭಿಮಾನದ ಸನ್ಮಾನ ಸಮಾರಂಭದಲ್ಲಿ ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷ ಸಂಗಣ್ಣಗೌಡ ನಾಲವಾರ, ಪಂಚ್ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಸುರೇಶ್ ಗುತ್ತೇದಾರ ಹಾಗೂ ಜಿಲ್ಲಾ ಮಟ್ಟದ ಹಿರಿಯ ನಾಗರಿಕರ ಸಂಘದ ಪ್ರಶಸ್ತಿ ಪುರಸ್ಕೃತ ಮಹ್ಮದ್ ಇಬ್ರಾಹಿಂ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.
‘ಜವಾಬ್ದಾರಿ ಹಾಗೂ ಸನ್ಮಾನಗಳು ಎಲ್ಲರಿಗೂ ದೊರೆಯುವುದಿಲ್ಲ. ಅರ್ಹತೆ ಮತ್ತು ಸಾಮರ್ಥ್ಯ ಹೊಂದಿದವರಿಗೆ ಮಾತ್ರ ದೊರೆಯುತ್ತವೆ. ಸಮಾಜದಿಂದ ದೊರೆಯುವ ಸನ್ಮಾನವು ವ್ಯಕ್ತಿಯ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ತಾವು ಕಾರ್ಯನಿರ್ವಹಿಸುವ ಕ್ಷೇತ್ರದಲ್ಲಿ ಇನ್ನಷ್ಟು ಉತ್ತಮವಾಗಿ ಕೆಲಸ ಮಾಡಲು ಇದು ಪ್ರೇರಣೆ ನೀಡುತ್ತದೆ’ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿದ ಸಂಗಣ್ಣಗೌಡ ನಾಲವಾರ, ಸುರೇಶ್ ಗುತ್ತೇದಾರ ಕರದಾಳ ಹಾಗೂ ಮಹ್ಮದ್ ಇಬ್ರಾಹಿಂ ಮಾತನಾಡಿದರು.
ಶಾಂತಕುಮಾರ್ ಮಳಖೇಡ, ರಾಜಶೇಖರ್ ಬಳ್ಳಾ, ದೇವಪ್ಪ ನಂದೂರಕರ್, ಹಾಜಿ ಸಾಬ್ ಮುಲ್ಲಾ, ಜಗನ್ನಾಥ ಬಡಿಗೇರ, ವಿಜಯಕುಮಾರ್ ಭಂಕಲಗಿ, ವಿಠಲ್ ಕಟ್ಟಿಮನಿ, ರವಿಶಂಕರ್ ಬುರ್ಲಿ, ಸಂತೋಷ ಕಟ್ಟಿಮನಿ, ಪ್ರಕಾಶ್ ವಿಶ್ವಕರ್ಮ, ಚಂದ್ರು ಕಾಶಿ ಇದ್ದರು. ನರಸಪ್ಪ ಚಿನ್ನಕಟ್ಟಿ ನಿರೂಪಿಸಿ, ವಂದಿಸಿದರು.


