ಕಲಬುರಗಿಜಿಲ್ಲೆ ಸುದ್ದಿ

ಪತ್ರಕರ್ತರ ಮೇಲಿನ ದೌರ್ಜನ್ಯ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಚಿತ್ತಾಪುರ: ದೆಹಲಿಯ ಜಂತರ್‌ ಮಂತರ್‌ನಲ್ಲಿ ವೃತ್ತಿನಿರತ ಯುವ ಪತ್ರಕರ್ತರ ಮೇಲೆ ಹಲ್ಲೆ ಹಾಗೂ ದೌರ್ಜನ್ಯ ನಡೆಸಿರುವ ಆರೋಪದ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚಿತ್ತಾಪುರ ತಾಲ್ಲೂಕು ಸಮಿತಿ ಒತ್ತಾಯಿಸಿದೆ.

ಈ ಕುರಿತು ಸೋಮವಾರ ಪತ್ರಿಕಾ ಹೇಳಿಕೆ ನೀಡಿರುವ ಸಂಘದ ತಾಲ್ಲೂಕು ಅಧ್ಯಕ್ಷ ಸಿದ್ದರಾಜ ಮಲ್ಕಂಡಿ, ಅಕ್ಟೋಬರ್‌ 3ರಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರ ರಾಜೀನಾಮೆಗೆ ಒತ್ತಾಯಿಸಿ ಜಂತರ್‌ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ವರದಿಗೆ ತೆರಳಿದ್ದ ಯುವ ಪತ್ರಕರ್ತರೊಂದಿಗೆ ದೆಹಲಿ ಪೊಲೀಸರು ಅಸಭ್ಯವಾಗಿ ವರ್ತಿಸಿರುವುದು ಖಂಡನೀಯ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮೂವರು ಯುವ ಪತ್ರಕರ್ತೆಯರು ದೆಹಲಿ ಪೊಲೀಸ್‌ ಸಿಬ್ಬಂದಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರು ನೀಡಿರುವ ಹಿನ್ನೆಲೆಯಲ್ಲಿ, ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಪತ್ರಕರ್ತರೊಂದಿಗೆ ಅಸಭ್ಯವಾಗಿ ವರ್ತಿಸಿದ ಘಟನೆ ಖಂಡಿಸಿ ಪಾರ್ಲಿಮೆಂಟ್‌ ಸ್ಟ್ರೀಟ್‌ ಠಾಣೆ ಎದುರು ಪ್ರತಿಭಟನೆ ನಡೆಸುತ್ತಿದ್ದ ಹಲವರನ್ನು ಬಂಧಿಸಿರುವ ಕ್ರಮವೂ ಖಂಡನೀಯ. ಪತ್ರಕರ್ತರು ಮುಕ್ತ ಹಾಗೂ ಭಯಮುಕ್ತ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸಲು ಅಗತ್ಯ ಅವಕಾಶ ಕಲ್ಪಿಸುವುದು ಸಂಬಂಧಪಟ್ಟ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.

ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ಹಾಗೂ ಮಹಿಳಾ ಪತ್ರಕರ್ತೆಯರಿಗೆ ಕಿರುಕುಳ ನೀಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಪತ್ರಕರ್ತರಿಗೆ ಅಗತ್ಯ ಭದ್ರತೆ ಹಾಗೂ ಸುರಕ್ಷಿತ ವಾತಾವರಣ ಕಲ್ಪಿಸಬೇಕು ಎಂದು ಸಿದ್ದರಾಜ ಮಲ್ಕಂಡಿ ಒತ್ತಾಯಿಸಿದ್ದಾರೆ.

janabhipraya

https://janabhipraya.com

Related Articles

Leave a Reply

Your email address will not be published. Required fields are marked *

Back to top button