ಕ್ರಾಂತಿಕಾರಿಗಳ ತ್ಯಾಗ ಇಂದಿನ ಪೀಳಿಗೆಗೆ ಸ್ಫೂರ್ತಿ: ನಾಗಯ್ಯ ಹಿರೇಮಠ

ಚಿತ್ತಾಪುರ: ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕ್ರಾಂತಿಕಾರಿಗಳು ತಮ್ಮ ಹೋರಾಟದ ಮೂಲಕ ಬ್ರಿಟಿಷರ ಎದೆ ನಡುಗಿಸಿದ್ದರು. ಅವರ ತ್ಯಾಗ ಮತ್ತು ಬಲಿದಾನ ಇಂದಿನ ಪೀಳಿಗೆಗೆ ಸ್ಫೂರ್ತಿಯಾಗಬೇಕು ಎಂದು ತಹಶೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು.
ಪಟ್ಟಣದ ಪ್ರಜಾಸೌಧ ಆವರಣದಲ್ಲಿ ಶುಕ್ರವಾರ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಾರತವು ಸುದೀರ್ಘ ಹಾಗೂ ಪ್ರಾಚೀನ ಇತಿಹಾಸ ಹೊಂದಿರುವ ದೇಶ. ಇಲ್ಲಿನ ಸಂಸ್ಕೃತಿ, ತತ್ವ ಮತ್ತು ಪರಂಪರೆ ವಿಶ್ವಕ್ಕೆ ಮಾದರಿಯಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಅನೇಕ ಮಹನೀಯರು ಪ್ರಾಣತ್ಯಾಗ ಮಾಡಿದ್ದಾರೆ. ಭಾರತದ ಅಖಂಡತೆ ಹಾಗೂ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಅವರು ನಡೆಸಿದ ಹೋರಾಟ ಸ್ಮರಣೀಯವಾಗಿದೆ ಎಂದರು.
ಲಾಲಾ ಲಜಪತ್ ರಾಯ್, ಭಗತ್ ಸಿಂಗ್ ಸೇರಿದಂತೆ ಅನೇಕ ಕ್ರಾಂತಿಕಾರಿಗಳು ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ತ್ಯಾಗ, ಬಲಿದಾನ ಮತ್ತು ದೇಶಪ್ರೇಮವನ್ನು ಇಂದಿನ ಯುವಪೀಳಿಗೆ ಎಂದಿಗೂ ಮರೆಯಬಾರದು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ ಮಾತನಾಡಿ, ಸ್ವಾತಂತ್ರ್ಯ ಲಭಿಸಿ 80 ವರ್ಷಗಳ ಅವಧಿಯಲ್ಲಿ ಭಾರತವು ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ದೇಶ, ಬಾಹ್ಯಾಕಾಶ ಕ್ಷೇತ್ರದಲ್ಲಿಯೂ ನಿರಂತರ ಸಾಧನೆ ಮಾಡುತ್ತಿದೆ. ಈ ಬೆಳವಣಿಗೆಗಳಿಂದ ಭಾರತ ಇಂದು ಬಲಿಷ್ಠ ರಾಷ್ಟ್ರವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ತಲೆ ಎತ್ತಿ ನಿಂತಿದೆ ಎಂದರು.
ದೇಶದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬ ನಾಗರಿಕನ ಪಾತ್ರವೂ ಮಹತ್ವದ್ದಾಗಿದೆ. ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಡೆದುಕೊಂಡು ದೇಶದ ಪ್ರಗತಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ ಮಾತನಾಡಿ, ಬುದ್ಧನ ಶಾಂತಿಯ ಸಂದೇಶ ಹಾಗೂ ಬಸವಣ್ಣನ ತತ್ವಗಳು ನಮಗೆ ಸಮಾನತೆ ಮತ್ತು ಮಾನವೀಯತೆಯ ಪಾಠ ಕಲಿಸಿವೆ. ಸಾಮಾಜಿಕ ನ್ಯಾಯದ ಮೂಲಕ ಸಮಾನತೆಯ ಆಶಯವನ್ನು ಬಲಪಡಿಸಿದ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕು. ಸ್ವಾತಂತ್ರ್ಯದ ಜೊತೆಗೆ ಸಾಮಾಜಿಕ ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಕಾಪಾಡಿಕೊಂಡು ಮಹಾಪುರುಷರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ ಮಾತನಾಡಿದರು.
ಗ್ರೇಡ್–2 ತಹಶೀಲ್ದಾರ್ ರಾಜಕುಮಾರ ಮರತೂರು, ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅಕ್ರಂ ಪಾಷಾ, ಪಿಡಬ್ಲ್ಯುಡಿ ಇಲಾಖೆ ಎಇಇ ಬಿ.ಕೆ. ಉಮೇಶ, ಸಿಪಿಐ ಸಿ.ಎಸಿ. ಪಾಟೀಲ್, ಪಿಎಸ್‌ಐ ಮಂಜುನಾಥ ರೆಡ್ಡಿ, ಕೃಷಿ ಸಮಾಜದ ಅಧ್ಯಕ್ಷ ನಾಗರೆಡ್ಡಿ ಗೋಪಸೇನ, ಕೃಷಿ ಸಹಾಯಕ ನಿರ್ದೇಶಕ ಸಂಜೀವಕುಮಾರ ಮಾನಕರೆ, ಒಕ್ಕೂಲುತನ ಹುಟ್ಟುವಳಿ ಸಹಕಾರ ಸಂಘದ ಅಧ್ಯಕ್ಷ ದೇವಿಂದ್ರ ಅರಣಕಲ್, ಸಿಡಿಪಿಒ ಆರತಿ ತುಪ್ಪದ, ಅಬಕಾರಿ ಪಿಎಸ್‌ಐ ವನಿತಾ ಹಿತ್ತಾಳೆ, ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ಪಂಡಿತ್ ಸಿಂಧೆ, ಪಂಚ್ ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮನಹಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪಶು ಇಲಾಖೆಯ ಮುಖ್ಯಾಧಿಕಾರಿ ಡಾ.ಶಂಕರ ಕಣ್ಣಿ ಸ್ವಾಗತಿಸಿದರು. ಶಿವಶರಣಪ್ಪ ಮಂಠಾಳೆ ವಂದಿಸಿದರು.



