ವಿಠಲ್ ಹೇರೂರ್ ವೃತ್ತದಲ್ಲಿ ಸಿದ್ದರಾಮಯ್ಯ ಪ್ರತಿಮೆ ಸ್ಥಾಪನೆಗೆ ಕೋಲಿ ಸಮಾಜ ವಿರೋಧ

ಕಲಬುರಗಿ: ನಗರದ ಅಫಜಲಪುರ ಮುಖ್ಯರಸ್ತೆಯಲ್ಲಿ ಹೈಕೋರ್ಟ್‌ಗೆ ತೆರಳುವ ಮಾರ್ಗದ ಮಧ್ಯದಲ್ಲಿರುವ ತ್ರಿಕೋನ ಸ್ಥಳದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಮೆ ಸ್ಥಾಪಿಸುವ ಉದ್ದೇಶವನ್ನು ಕೈಬಿಡಬೇಕು ಎಂದು ಕೋಲಿ ಸಮಾಜದ ಮುಖಂಡ ರಮೇಶ್ ನಾಟೀಕಾರ್ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಹಿಂದ ನಾಯಕ ಹಾಗೂ ದಿವಂಗತ ವಿಠಲ್ ಹೇರೂರ್ ಅವರ ಹೆಸರಿನಲ್ಲಿರುವ ವೃತ್ತದಲ್ಲಿ ಕೆಲವರು ರಾತ್ರಿ ವೇಳೆ ಸಿದ್ದರಾಮಯ್ಯ ಅವರ ಪ್ರತಿಮೆ ಸ್ಥಾಪಿಸಲು ಉದ್ದೇಶಿಸಿರುವುದು ಖಂಡನೀಯ. ಇದರಿಂದ ವಿಠಲ್ ಹೇರೂರ್ ಅಭಿಮಾನಿಗಳು ಹಾಗೂ ಸ್ವಾಭಿಮಾನಿ ವಿಶ್ವ ಹೇರೂರ್ ಅಭಿಮಾನಿಗಳ ಸಂಘದಲ್ಲಿ ಅಸಮಾಧಾನ ಉಂಟಾಗಿದೆ ಎಂದು ಹೇಳಿದರು.
ಹಾಲುಮತ–ಗಂಗಾಮತ ಸಮುದಾಯಗಳು ಸಹೋದರ ಸಮುದಾಯಗಳಾಗಿದ್ದು, ಕೆಲವರು ಅನಗತ್ಯ ಗೊಂದಲ ಸೃಷ್ಟಿಸಿ ಎರಡೂ ಸಮುದಾಯಗಳ ನಡುವಿನ ಸಾಮರಸ್ಯ ಹದಗೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ಉಂಟಾಗಿದೆ. ಆದ್ದರಿಂದ ಆಡಳಿತ ವರ್ಗ ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡದೆ, ವಿಠಲ್ ಹೇರೂರ್ ಅವರ ಪ್ರತಿಮೆ ಸ್ಥಾಪನೆಗೆ ಸಹಕರಿಸಬೇಕು ಎಂದು ಆಗ್ರಹಿಸಿದರು.
ಎರಡು ಸಮುದಾಯಗಳ ಸಾಮರಸ್ಯ ಕಾಪಾಡಲು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸದೆ ಏಕಾಏಕಿ ತಕರಾರು ಹಾಗೂ ಆರೋಪಗಳಿಗೆ ಅವಕಾಶ ನೀಡಿರುವುದು ವಿಷಾದನೀಯ ಎಂದು ನಾಟೀಕಾರ್ ಹೇಳಿದರು.
ಇದೇ ನೆಪದಲ್ಲಿ ಕೆಲ ಸಮುದಾಯದ ಮುಖಂಡರು ಮತ್ತೆ ಅದೇ ಸ್ಥಳದಲ್ಲಿ ಸಿದ್ದರಾಮಯ್ಯ ಅವರ ಪ್ರತಿಮೆ ಸ್ಥಾಪಿಸಬೇಕು ಎಂದು ಪ್ರತಿಭಟನೆ ಹಾಗೂ ಹೋರಾಟ ನಡೆಸುತ್ತಿರುವುದು ಸರಿಯಲ್ಲ ಎಂದು ಅವರು ಟೀಕಿಸಿದರು.
ಜೀವಂತ ವ್ಯಕ್ತಿಗಳ ಪ್ರತಿಮೆ ಸ್ಥಾಪಿಸುವುದು ಸೂಕ್ತವಲ್ಲ. ಸಿದ್ದರಾಮಯ್ಯ ಅವರ ಪ್ರತಿಮೆ ಸ್ಥಾಪಿಸುವುದನ್ನೂ ಕೈಬಿಡಬೇಕು. ವಿಠಲ್ ಹೇರೂರ್ ಅವರ ಹೆಸರಿನಲ್ಲಿರುವ ವೃತ್ತದಲ್ಲಿ ಅವರ ಪ್ರತಿಮೆ ಸ್ಥಾಪನೆಗೆ ಅನುಮತಿ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ರಹ್ಮರ್ಷಿ ರಾಜಗುರುಸ್ವಾಮೀಜಿ, ಶರಣಪ್ಪ ತಳವಾರ್, ಅವೇಣ್ಣ ಮಾಕೇರಿ, ಬಸವರಾಜ ಹರವಾಳ್, ಶಾಂತಪ್ಪ ಕೂಡಿ, ಬಸವರಾಜ ಬೂದಿಹಾಳ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



