ಶಿಕ್ಷಕರ ಸೇವೆ ಸ್ಮರಿಸುವುದು ಸಮಾಜದ ಕರ್ತವ್ಯ: ವಿಜಯಕುಮಾರ ಪಾಟೀಲ

ಕಲಬುರಗಿ: ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅ. 3ರಂದು ಹೃದಯಾಭಿನಂದನಾ ಸಮಾರಂಭ ಆಯೋಜಿಸಲಾಗಿದೆ.
ನಗರದ ಕನ್ನಡ ಭವನದಲ್ಲಿ ಶನಿವಾರ ಬೆಳಿಗ್ಗೆ 11.15ಕ್ಕೆ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.
ಶಿಕ್ಷಕರ ಸೇವೆ ಮತ್ತು ತ್ಯಾಗವನ್ನು ಸ್ಮರಿಸುವ ಕಾರ್ಯವನ್ನು ಸಮಾಜ ಮಾಡಬೇಕು. ಹೆತ್ತ ತಾಯಿಯ ನಂತರ ಜೀವನದ ಮೌಲ್ಯಗಳು, ಶಿಕ್ಷಣ ಹಾಗೂ ಬದುಕಿನ ಮಾರ್ಗವನ್ನು ತೋರಿಸುವವರು ಶಿಕ್ಷಕರು. ಹೀಗಾಗಿ ಅವರನ್ನು ಸಮಾಜದ ರಕ್ಷಕರು ಎಂದು ಕರೆಯಲಾಗುತ್ತದೆ. ಶಿಕ್ಷಕರನ್ನು ಸದಾ ಗೌರವಿಸುವ ಕಾರ್ಯವನ್ನು ಪರಿಷತ್ತು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಸಾಹಿತ್ಯ ಪ್ರೇರಕ ನೀಲಕಂಠರಾವ್ ಮೂಲಗೆ ಸಮಾರಂಭ ಉದ್ಘಾಟಿಸಲಿದ್ದಾರೆ. ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹೇಶ ಹೂಗಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಂತೋಷ ಗಂಗೂ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಭೋಜನಗೌಡ ಪಾಟೀಲ, ನ್ಯಾಯವಾದಿ ಆರತಿ ತಿವಾರಿ ಹಾಗೂ ವಿಜಯಕುಮಾರ ಪಾಟೀಲ ಕಲ್ಲಹಂಗರಗಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.



