ಕಲಬುರಗಿಜಿಲ್ಲೆ ಸುದ್ದಿ

ವಿಠಲ ಹೇರೂರ ಪ್ರತಿಮೆ ಸ್ಥಾಪನೆಗೆ ಸೆ.28ರಂದು ಪೂರ್ವಭಾವಿ ಸಭೆ

ಕಲಬುರಗಿ, ಸೆ.23: ನಗರದ ಹೈಕೋರ್ಟ್ ಕ್ರಾಸ್‌ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಮೆ ತೆರವುಗೊಳಿಸಿರುವ ಪಾಲಿಕೆಯ ಕ್ರಮವನ್ನು ಸ್ವಾಗತಿಸಿರುವ ಸ್ವಾಭಿಮಾನಿ ವಿಠಲ ಹೇರೂರ ಅಭಿಮಾನಿಗಳ ಸಂಘ, ಅದೇ ಸ್ಥಳದಲ್ಲಿ ಅಹಿಂದ ನಾಯಕ ಹಾಗೂ ಹೋರಾಟಗಾರ ದಿ. ವಿಠಲ ಹೇರೂರ ಅವರ ಪ್ರತಿಮೆ ಸ್ಥಾಪನೆಗೆ ಸೆ.28ರಂದು ಸಭೆ ನಡೆಸಲು ನಿರ್ಧರಿಸಿದೆ.

ಅಫಜಲಪುರ ತಾಲ್ಲೂಕಿನ ಗಾಣಗಾಪುರದ ಶಕ್ತಿ ಕೇಂದ್ರದಲ್ಲಿ ಸೆ.28ರಂದು ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಸಂಘದ ಪ್ರಮುಖ ಹಾಗೂ ಬಿಜೆಪಿ ಮುಖಂಡ ಅವಣ್ಣ ಮಾಕೇರಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಹೈಕೋರ್ಟ್ ಕ್ರಾಸ್‌ನಲ್ಲಿ ಕೆಲ ಸಹೋದರ ಸಮುದಾಯದ ಬಂಧುಗಳು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಮೆ ಸ್ಥಾಪಿಸಿರುವುದು ಖಂಡನೀಯ. ಹಾಲುಮತ–ಗಂಗಾಮತ ಸಮುದಾಯಗಳು ಸಹೋದರ ಸಮುದಾಯಗಳಾಗಿದ್ದು, ಕೆಲವರು ಅನಗತ್ಯ ಗೊಂದಲ ಸೃಷ್ಟಿಸಿ ಸಮುದಾಯಗಳ ನಡುವೆ ಸಾಮರಸ್ಯ ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಸಿದ್ದರಾಮಯ್ಯ ಅವರ ಪ್ರತಿಮೆ ಸ್ಥಾಪನೆಗೆ ಅವಕಾಶ ಮಾಡಿಕೊಡದೆ, ದಿ. ವಿಠಲ ಹೇರೂರ ಅವರ ಪ್ರತಿಮೆ ಸ್ಥಾಪನೆಗೆ ಜಿಲ್ಲಾಡಳಿತ ಸಹಕರಿಸಬೇಕು. ಎರಡೂ ಸಮುದಾಯಗಳ ಸಾಮರಸ್ಯ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ದಿ. ವಿಠಲ ಹೇರೂರ ಅವರು ಅಹಿಂದ ಹಾಗೂ ಶೋಷಿತ ವರ್ಗಗಳ ಧ್ವನಿಯಾಗಿ ರಾಜ್ಯದಾದ್ಯಂತ ಸಮಾಜವನ್ನು ಜಾಗೃತಗೊಳಿಸಿದ ಮಹಾನ್ ನಾಯಕರಾಗಿದ್ದರು. ಅವರ ಪುಣ್ಯಸ್ಮರಣೆ ಅಂಗವಾಗಿ 2015ರ ಡಿಸೆಂಬರ್‌ನಲ್ಲಿ ಅಫಜಲಪುರ ರಸ್ತೆಯ ಹೈಕೋರ್ಟ್ ಕ್ರಾಸ್‌ನಲ್ಲಿ ಪ್ರತಿಮೆ ಸ್ಥಾಪಿಸಿ, ನಾಮಫಲಕ ಅಳವಡಿಸಲಾಗಿತ್ತು. ಅಲ್ಲಿಂದ ಪ್ರತಿವರ್ಷ ಬಡವರಿಗೆ ಪ್ರಸಾದ, ಕುಡಿಯುವ ನೀರು ಹಾಗೂ ಇತರ ಸೇವಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಹೇರೂರ ಅವರ ಪುಣ್ಯಸ್ಮರಣೆ ಹಾಗೂ ಜನ್ಮದಿನದ ಸಂದರ್ಭದಲ್ಲಿಯೂ ಸಮುದಾಯದ ಬಂಧುಗಳು ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ ಎಂದು ಅವರು ಹೇಳಿದರು.

2023ರಲ್ಲಿ ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಕಲಬುರಗಿಗೆ ಆಗಮಿಸಿದ್ದ ಸಂದರ್ಭದಲ್ಲಿ, ಅವರ ಚಿತ್ರವಿರುವ ಬೋರ್ಡ್ ಅನ್ನು ವಿಠಲ ಹೇರೂರ ಅವರ ಪ್ರತಿಮೆ ಸಮೀಪ ನಿಲ್ಲಿಸಿ ಗೊಂದಲ ಸೃಷ್ಟಿಸಲಾಗಿತ್ತು. ಈ ಕುರಿತು ಪ್ರಶ್ನಿಸಿದಾಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಾವಧಿ ಮುಗಿದ ಬಳಿಕ ಅದನ್ನು ತೆರವುಗೊಳಿಸುವುದಾಗಿ ಹೇಳಿದ್ದರು ಎಂದು ಅವಣ್ಣ ಮಾಕೇರಿ ತಿಳಿಸಿದರು.

ಸೆ.17ರಂದು ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಫಜಲಪುರ–ಗಾಣಗಾಪುರ ದೇವಸ್ಥಾನಕ್ಕೆ ತೆರಳಲಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ, ಸಿದ್ದರಾಮಯ್ಯ ಅವರ ಬೃಹತ್ ಪ್ರತಿಮೆಯನ್ನು ರಾತ್ರೋರಾತ್ರಿ ತೆರವುಗೊಳಿಸಿ ಮುಚ್ಚಿಡಲಾಗಿತ್ತು. ಬಳಿಕ ಪಾಲಿಕೆ ಹಾಗೂ ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸಿ ಪ್ರತಿಮೆ ತೆರವುಗೊಳಿಸುವ ಮೂಲಕ ಪರಿಸ್ಥಿತಿಯನ್ನು ಶಾಂತಗೊಳಿಸಿರುವುದು ಸ್ವಾಗತಾರ್ಹ ಎಂದು ಅವರು ಹೇಳಿದರು.

ಮತ್ತೊಂದೆಡೆ, ಅದೇ ಸ್ಥಳದಲ್ಲಿ ಸಿದ್ದರಾಮಯ್ಯ ಅವರ ಪ್ರತಿಮೆ ಸ್ಥಾಪಿಸಬೇಕು ಎಂದು ಕೆಲವರು ಪ್ರತಿಭಟನೆ ನಡೆಸುತ್ತಿರುವುದು ಸರಿಯಾದ ಬೆಳವಣಿಗೆಯಲ್ಲ. ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ದುಡಿದ ಇಬ್ಬರು ನಾಯಕರ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ನಡೆಯಬಾರದು. ಸಿದ್ದರಾಮಯ್ಯ ಅವರ ಪುತ್ಥಳಿಯನ್ನು ನಗರದ ಪ್ರತಿಷ್ಠಿತ ಬೇರೊಂದು ಸ್ಥಳದಲ್ಲಿ ಸ್ಥಾಪಿಸಲು ಸಹಕಾರ ನೀಡಬೇಕು. ದಿ. ವಿಠಲ ಹೇರೂರ ಅವರ ಪ್ರತಿಮೆ ಸ್ಥಾಪನೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜು ಗುರುಸ್ವಾಮಿ, ಲಚ್ಚಪ್ಪ ಜಮಾದಾರ್, ಶರಣಪ್ಪ ತಳವಾರ್, ಅವಣ್ಣಗೌಡ ಪಾಟೀಲ, ಮೇರಾಜ್ ಹರವಾಳ್, ಗುರುನಾಥ ಹೇರೂರ, ರವಿ ಡೊಂಗರಗಾಂವ್, ಸುಭಾಷ್ ಯಳಸಂಗಿ, ಶಿವು ಧಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button