ಯಾದಗಿರಿ

ಕೆಂಭಾವಿ ಹೋಬಳಿ ಬರಪೀಡಿತ ಘೋಷಣೆ: ಶಾಸಕ ದರ್ಶನಾಪುರರಿಗೆ ಮಹಿಪಾಲ್ ರೆಡ್ಡಿ ಅಭಿನಂದನೆ

ಕೆಂಭಾವಿ: ಶಹಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೆಂಭಾವಿ ಹೋಬಳಿಯ ಗ್ರಾಮಗಳು ಹಾಗೂ ಸುರಪುರ ತಾಲ್ಲೂಕನ್ನು ಬರಪೀಡಿತ ಪ್ರದೇಶಗಳೆಂದು ಸರ್ಕಾರ ಘೋಷಿಸಿರುವ ಹಿನ್ನೆಲೆಯಲ್ಲಿ, ಶಾಸಕ ಹಾಗೂ ಮಾಜಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರನ್ನು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮಹಿಪಾಲ್ ರೆಡ್ಡಿ ಡಿಗ್ಗಾವಿ ಅಭಿನಂದಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸರ್ಕಾರದ ಮೊದಲ ಹಂತದ ಬರಪೀಡಿತ ಪಟ್ಟಿಯಲ್ಲಿಯೇ ಸುರಪುರ ತಾಲ್ಲೂಕು ಹಾಗೂ ಶಹಾಪುರ ವಿಧಾನಸಭಾ ಕ್ಷೇತ್ರದ ಗ್ರಾಮಗಳು ಸೇರ್ಪಡೆಯಾಗಬೇಕಿತ್ತು. ಆದರೆ, ಕೆಲವು ತಾಂತ್ರಿಕ ಕಾರಣಗಳಿಂದಾಗಿ ಬರಪೀಡಿತ ಪ್ರದೇಶಗಳ ಘೋಷಣೆ ವಿಳಂಬವಾಗಿತ್ತು ಎಂದು ತಿಳಿಸಿದ್ದಾರೆ.

ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರು ಸರ್ಕಾರದ ಮಟ್ಟದಲ್ಲಿ ನಿರಂತರವಾಗಿ ಪ್ರಯತ್ನ ನಡೆಸಿ, ತಾಂತ್ರಿಕ ದೋಷಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದರ ಫಲವಾಗಿ ಕೆಂಭಾವಿ ಹೋಬಳಿ ಹಾಗೂ ಸುರಪುರ ತಾಲ್ಲೂಕನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮಹಿಪಾಲ್ ರೆಡ್ಡಿ ಡಿಗ್ಗಾವಿ ತಿಳಿಸಿದ್ದಾರೆ.

ರೈತರು ಎದುರಿಸುತ್ತಿರುವ ಸಂಕಷ್ಟವನ್ನು ಮನಗಂಡು ಬರಪರಿಹಾರ ಹಾಗೂ ಅಗತ್ಯ ನೆರವು ದೊರೆಯುವಂತೆ ಸರ್ಕಾರದ ಗಮನ ಸೆಳೆದಿರುವ ಶಾಸಕರ ಪ್ರಯತ್ನ ಶ್ಲಾಘನೀಯವಾಗಿದೆ ಎಂದು ಅವರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button