ಕಲಬುರಗಿಜಿಲ್ಲೆ ಸುದ್ದಿ

ನೋಂದಣಿ ಇಲ್ಲದ ಸಂಘಟನೆಗಳ ಮನವಿ ಪತ್ರ ಸ್ವೀಕರಿಸಬಾರದು: ಸಿದ್ದು ಜಮಾದಾರ

ಕಲಬುರಗಿ: ಜಿಲ್ಲೆಯಲ್ಲಿ ನೋಂದಣಿ ಮಾಡಿಸದ ಸಂಘ, ಸಮಿತಿ, ವೇದಿಕೆ ಹಾಗೂ ಅಭಿಮಾನಿ ಬಳಗಗಳ ಹೆಸರಿನಲ್ಲಿ ಪ್ರತಿಭಟನೆ, ಮೆರವಣಿಗೆ, ಸತ್ಯಾಗ್ರಹ ನಡೆಸಿ ಸರ್ಕಾರಿ ಕಚೇರಿಗಳಿಗೆ ಮನವಿ ಪತ್ರ ಸಲ್ಲಿಸುವುದನ್ನು ನಿಯಂತ್ರಿಸಬೇಕು ಎಂದು ಜೈ ಕರ್ನಾಟಕ ಜನಪರ ಸಮಿತಿ ರಾಜ್ಯ ಅಧ್ಯಕ್ಷ ಸಿದ್ದು (ಗೌತಮ) ಎಚ್. ಜಮಾದಾರ ಆಗ್ರಹಿಸಿದ್ದಾರೆ.

ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವ ಅವರು, ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದ ಸರ್ಕಾರಿ ಕಚೇರಿಗಳಲ್ಲಿ ನೋಂದಣಿ ಸಂಖ್ಯೆ ಹೊಂದಿರುವ ಸಂಘಟನೆಗಳಿಂದ ಮಾತ್ರ ಮನವಿ ಪತ್ರಗಳನ್ನು ಸ್ವೀಕರಿಸುವಂತೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಮನವಿ ಸಲ್ಲಿಸುವ ಸಂಘಟನೆಗಳು ತಮ್ಮ ಬೈಲಾ ಹಾಗೂ ನೋಂದಣಿ ಪ್ರಮಾಣಪತ್ರದ ಜೆರಾಕ್ಸ್ ಪ್ರತಿಯನ್ನು ಕಚೇರಿಗೆ ಕಡ್ಡಾಯವಾಗಿ ಸಲ್ಲಿಸುವ ವ್ಯವಸ್ಥೆ ಜಾರಿಗೆ ತರಬೇಕು. ಆದರೆ ಬಡಾವಣೆ ಅಥವಾ ಸಾರ್ವಜನಿಕರ ಪರವಾಗಿ ನಾಗರಿಕರು ಒಟ್ಟಾಗಿ ಸಲ್ಲಿಸುವ ಮನವಿ ಪತ್ರಗಳನ್ನು ಸ್ವೀಕರಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಸರ್ಕಾರಿ ನೌಕರರ ವಿರುದ್ಧ ಕ್ರಮಕ್ಕೆ ಆಗ್ರಹ

ಸರ್ಕಾರಿ ನೌಕರರು ಕರ್ತವ್ಯದ ಅವಧಿಯಲ್ಲಿ ರಜೆ ಪಡೆದು ಖಾಸಗಿ ವ್ಯವಹಾರಗಳಲ್ಲಿ ತೊಡಗುವುದು, ಮನೆ, ನಿವೇಶನ ಹಾಗೂ ಜಮೀನುಗಳ ಮಾರಾಟದಲ್ಲಿ ಕಮಿಷನ್ ಆಧಾರಿತ ದಲ್ಲಾಳಿಗಳಂತೆ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಈ ಕುರಿತು ದಾಖಲೆ ಹಾಗೂ ಸಾಕ್ಷ್ಯಗಳು ಲಭ್ಯವಾದಲ್ಲಿ ಸಂಬಂಧಪಟ್ಟ ನೌಕರರ ವಿರುದ್ಧ ತನಿಖೆ ನಡೆಸಬೇಕು ಎಂದು ಸಿದ್ದು ಜಮಾದಾರ ಒತ್ತಾಯಿಸಿದ್ದಾರೆ.

ತನಿಖೆಯಲ್ಲಿ ಆರೋಪ ಸಾಬೀತಾದರೆ ನಿಯಮಾನುಸಾರ ಕಾನೂನು ಕ್ರಮ ಕೈಗೊಂಡು ದಂಡ ಹಾಗೂ ಅಮಾನತು ಶಿಕ್ಷೆ ವಿಧಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಅಲ್ಲದೆ, ಶಾಸಕರು ಹಾಗೂ ಸಚಿವರು ತಮ್ಮ ಸಂಬಂಧಿಕರೆಂದು ಹೇಳಿಕೊಂಡು ಕೆಲವರು ಸರ್ಕಾರಿ ನೌಕರರ ಮೇಲೆ ಪ್ರಭಾವ ಬೀರುವ ಪ್ರಯತ್ನ ನಡೆಸುತ್ತಿರುವ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ತಮ್ಮ ಬೇಡಿಕೆಗಳನ್ನು ಒಂದು ವಾರದೊಳಗೆ ಈಡೇರಿಸದಿದ್ದರೆ ಬೀದಿಗಿಳಿದು ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಸಿದ್ದು ಜಮಾದಾರ ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಿದರೆ ಸಂಬಂಧಪಟ್ಟ ಅಧಿಕಾರಿಗಳೇ ನೇರ ಹೊಣೆಗಾರರಾಗಲಿದ್ದಾರೆ ಎಂದು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button