ಬರಪೀಡಿತ ತಾಲ್ಲೂಕುಗಳ ಪಟ್ಟಿಗೆ ಜಿಲ್ಲೆಯ ಎಲ್ಲ 11 ತಾಲ್ಲೂಕು ಸೇರ್ಪಡೆ: ಅಜಯ್ ಸಿಂಗ್

ಕಲಬುರಗಿ, ಸೆ.23: ರಾಜ್ಯ ಸರ್ಕಾರ ಮೂರನೇ ಹಂತದಲ್ಲಿ ಮತ್ತಷ್ಟು ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿ ಆದೇಶ ಹೊರಡಿಸಿದ್ದು, ಇದರಿಂದ ಕಲಬುರಗಿ ಜಿಲ್ಲೆಯ ಜೇವರ್ಗಿ, ಯಡ್ರಾಮಿ ಸೇರಿದಂತೆ ಎಲ್ಲ 11 ತಾಲ್ಲೂಕುಗಳು ಬರಪೀಡಿತ ತಾಲ್ಲೂಕುಗಳ ಪಟ್ಟಿಗೆ ಸೇರ್ಪಡೆಯಾಗಿವೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವ ಡಾ. ಅಜಯ್ ಸಿಂಗ್ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ರೈತರು ಹಾಗೂ ಜನರ ಹಿತಾಸಕ್ತಿಗೆ ಸದಾ ಬದ್ಧವಾಗಿದೆ. ಬರ ಘೋಷಣೆ ಹಾಗೂ ಪರಿಹಾರ ಕ್ರಮಗಳ ವಿಚಾರದಲ್ಲಿ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿದರು.
ಮುಂಬರುವ ದಿನಗಳಲ್ಲಿಯೂ ಬರ ಪರಿಸ್ಥಿತಿಯ ಮೇಲ್ವಿಚಾರಣೆ ಮುಂದುವರಿಯಲಿದ್ದು, ಅಗತ್ಯ ಕಂಡುಬಂದಲ್ಲಿ ಮುಂದಿನ ಹಂತದಲ್ಲಿ ಹೆಚ್ಚುವರಿ ತಾಲ್ಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲಾಗುವುದು. ಬೆಳೆ ಹಾನಿಯ ವಾಸ್ತವಿಕ ಚಿತ್ರಣ ಆಧರಿಸಿ, ಬರದಿಂದ ಸಂಕಷ್ಟಕ್ಕೀಡಾಗಿರುವ ರೈತರಿಗೆ ನಿಯಮಾನುಸಾರ ಅಗತ್ಯ ನೆರವು ತಲುಪಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಬರ ಘೋಷಣೆಗೆ ಸೆ.30ರವರೆಗೆ ಕಾಲಾವಕಾಶವಿದ್ದು, ಅಷ್ಟರೊಳಗೆ ರಾಜ್ಯದ ಸುಮಾರು 180ರಿಂದ 200 ತಾಲ್ಲೂಕುಗಳು ಬರಪೀಡಿತ ಪಟ್ಟಿಗೆ ಸೇರ್ಪಡೆಯಾಗುವ ನಿರೀಕ್ಷೆಯಿದೆ. ಬರದಿಂದ ಸಂಕಷ್ಟಕ್ಕೊಳಗಾದ ರೈತರು ಹಾಗೂ ಸಾರ್ವಜನಿಕರ ನೆರವಿಗೆ ಸರ್ಕಾರ ಸದಾ ಸಿದ್ಧವಿದೆ ಎಂದು ಸಚಿವರು ಭರವಸೆ ನೀಡಿದರು.
ಕಲಬುರಗಿ ಜಿಲ್ಲೆಯ ಎಲ್ಲ 11 ತಾಲ್ಲೂಕುಗಳನ್ನು ಇದೀಗ ಅಧಿಕೃತವಾಗಿ ಬರಪೀಡಿತ ತಾಲ್ಲೂಕುಗಳ ಪಟ್ಟಿಗೆ ಸೇರಿಸಲಾಗಿದೆ. ಸರ್ಕಾರ ಹಂತ ಹಂತವಾಗಿ ನಡೆಸಿದ ಜಂಟಿ ಸಮೀಕ್ಷೆ ಹಾಗೂ ಮೌಲ್ಯಮಾಪನದ ನಂತರ ಈ ಕ್ರಮ ಕೈಗೊಂಡಿದೆ ಎಂದು ಅವರು ಹೇಳಿದರು.
ತಳಮಟ್ಟದ ಸಮೀಕ್ಷೆ ಪೂರ್ಣಗೊಂಡ ಬಳಿಕ ಅಫಜಲಪುರ, ಆಳಂದ, ಚಿತ್ತಾಪುರ, ಕಲಬುರಗಿ, ಯಡ್ರಾಮಿ, ಶಹಾಬಾದ್ ಹಾಗೂ ಮೂರನೇ ಹಂತದಲ್ಲಿ ಚಿಂಚೋಳಿ, ಜೇವರ್ಗಿ, ಕಾಳಗಿ, ಕಮಲಾಪುರ ಮತ್ತು ಸೇಡಂ ತಾಲ್ಲೂಕುಗಳನ್ನು ಒಳಗೊಂಡಂತೆ ಜಿಲ್ಲೆಯ ಒಟ್ಟು 11 ತಾಲ್ಲೂಕುಗಳನ್ನು ತೀವ್ರ ಬರಪೀಡಿತ ಪಟ್ಟಿಗೆ ಸೇರ್ಪಡೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಬೆಳೆಹಾನಿ ಸಮೀಕ್ಷೆಗೆ ಒತ್ತು ನೀಡಲಾಗುತ್ತಿದೆ ಎಂದು ಸಚಿವ ಅಜಯ್ ಸಿಂಗ್ ತಿಳಿಸಿದರು.
ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿಯನ್ನು ವೈಜ್ಞಾನಿಕವಾಗಿ ನಿರಂತರವಾಗಿ ಮೌಲ್ಯಮಾಪನ ಮಾಡಲಾಗುತ್ತಿದೆ. ರೈತರ ಸಂಕಷ್ಟಕ್ಕೆ ತ್ವರಿತವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.
ರಾಜ್ಯದ ಬರ ಪರಿಸ್ಥಿತಿಯನ್ನು ಎದುರಿಸಲು ಹಾಗೂ ಸಂಕಷ್ಟದಲ್ಲಿರುವವರಿಗೆ ಅಗತ್ಯ ನೆರವು ಒದಗಿಸಲು ಸರ್ಕಾರ ಸಂಪೂರ್ಣ ಬದ್ಧವಾಗಿದೆ. ರೈತರು ಮತ್ತು ಸಾರ್ವಜನಿಕರ ಹಿತ ರಕ್ಷಣೆಗೆ ಸರ್ಕಾರ ಹಲವು ಪ್ರಮುಖ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಸಚಿವರು ಭರವಸೆ ನೀಡಿದರು.



