ಕಲಬುರಗಿಜಿಲ್ಲೆ ಸುದ್ದಿ

ಹೇರೂರ್ ವೃತ್ತದಲ್ಲಿ ಸಿದ್ದರಾಮಯ್ಯ ಮೂರ್ತಿ ಬೇಡ: ಕೋಲಿ ಸಮಾಜ

ಕಡೆಗಣಿಸಿದರೆ ಬೀದಿಗಿಳಿದು ಹೋರಾಟದ ಎಚ್ಚರಿಕೆ

ಚಿತ್ತಾಪುರ: ಕಲಬುರಗಿ ನಗರದ ಅಫಜಲಪುರ ರಸ್ತೆಯ ಹೈಕೋರ್ಟ್‌ ಮಾರ್ಗದ ವೃತ್ತದಲ್ಲಿ ಈಗಾಗಲೇ ದಿ. ವಿಠ್ಠಲ್ ಹೇರೂರ್ ಅವರ ಹೆಸರಿನ ನಾಮಫಲಕ ಅಳವಡಿಸಲಾಗಿದ್ದು, ಅಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂರ್ತಿ ಸ್ಥಾಪನೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ತಾಲೂಕು ಕೋಲಿ ಸಮಾಜ ಒತ್ತಾಯಿಸಿದೆ.

ತಾಲೂಕು ಕೋಲಿ ಸಮಾಜದ ಅಧ್ಯಕ್ಷ ನಿಂಗಣ್ಣ ಹೆಗಲೇರಿ ನೇತೃತ್ವದಲ್ಲಿ ಸಮಾಜದ ಮುಖಂಡರು ಗುರುವಾರ ತಹಶೀಲ್ದಾರ್ ಅವರಿಗೆ ಮುಖ್ಯಮಂತ್ರಿ ಅವರಿಗೆ ಬರೆದ ಮನವಿ ಪತ್ರ ಸಲ್ಲಿಸಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ‘ವಿಠ್ಠಲ್ ಹೇರೂರ್ ಅವರ ನಾಮಫಲಕ ಇರುವ ವೃತ್ತದಲ್ಲಿ ಕೆಲವರು ರಾತ್ರೋರಾತ್ರಿ ಸಿದ್ದರಾಮಯ್ಯ ಅವರ ಮೂರ್ತಿ ತಂದು ಇಟ್ಟಿದ್ದರು. ವಿಷಯ ತಿಳಿದ ಮಹಾನಗರ ಪಾಲಿಕೆ ಅಧಿಕಾರಿಗಳು ಮೂರ್ತಿಯನ್ನು ತೆರವುಗೊಳಿಸಿದ್ದಾರೆ. ಇದು ಕೋಲಿ, ಕಬ್ಬಲಿಗ ಸಮಾಜದ ಭಾವನೆಗಳಿಗೆ ಧಕ್ಕೆ ತರುವ ಕೆಲಸ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘2013ರಿಂದಲೇ ಸದರಿ ವೃತ್ತದಲ್ಲಿ ದಿ. ವಿಠ್ಠಲ್ ಹೇರೂರ್ ಅವರ ಭಾವಚಿತ್ರವುಳ್ಳ ನಾಮಫಲಕ ಅಳವಡಿಸಿ, ಪ್ರತಿವರ್ಷ ಪುಣ್ಯಸ್ಮರಣೆ, ಜಯಂತಿ, ಅನ್ನದಾಸೋಹ ಹಾಗೂ ಪೂಜಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ವೃತ್ತವು ವಿಠ್ಠಲ್ ಹೇರೂರ್ ವೃತ್ತ ಎಂದೇ ಪ್ರಸಿದ್ಧಿಯಾಗಿದೆ. ಹೀಗಿರುವಾಗ ಬೇರೆ ಮೂರ್ತಿ ಸ್ಥಾಪಿಸಲು ಮುಂದಾಗಿರುವುದು ಸಮಾಜದ ಸ್ವಾಭಿಮಾನಕ್ಕೆ ಧಕ್ಕೆ ತರುವ ಕ್ರಮ’ ಎಂದು ಹೇಳಿದರು.

ವೃತ್ತದಲ್ಲಿ ದಿ. ವಿಠ್ಠಲ್ ಹೇರೂರ್ ಅವರ ಮೂರ್ತಿ ಹೊರತುಪಡಿಸಿ ಬೇರೆ ಯಾವುದೇ ಮೂರ್ತಿ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ. ಸರ್ಕಾರವು ಸಿದ್ದರಾಮಯ್ಯ ಅವರ ಮೂರ್ತಿ ಸ್ಥಾಪನೆಗೆ ಅವಕಾಶ ಮಾಡಿಕೊಡಬಾರದು. ಸಮಾಜದ ಮನವಿಯನ್ನು ಕಡೆಗಣಿಸಿದರೆ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

ಕೋಲಿ ಸಮಾಜದ ಗೌರವಾಧ್ಯಕ್ಷ ರಾಮಲಿಂಗ ಬಾನರ್, ಪ್ರಧಾನ ಕಾರ್ಯದರ್ಶಿ ಕರಣಕುಮಾರ ಅಲ್ಲೂರ, ನಗರಾಧ್ಯಕ್ಷ ಪ್ರಭು ಹಲಕರ್ಟಿ, ಮುಖಂಡರಾದ ಬಸವರಾಜ ಚಿನ್ನಮಳ್ಳಿ, ಮಲ್ಲಿಕಾರ್ಜುನ ಎಮ್ಮೆನೋರ, ಹಣಮಂತ ಸಂಕನೂರ್, ಲಕ್ಷ್ಮೀಕಾಂತ ಸಾಲಿ, ದೇವಿಂದ್ರ ಅರಣಕಲ್, ಭೀಮಣ್ಣ ಹೊತಿನಮಡಿ, ಶರಣಪ್ಪ ನಾಶಿ, ಮುನಿಯಪ್ಪ ಕೊಳ್ಳಿ, ಚಂದ್ರು ಕಾಳಗಿ, ದತ್ತು ಮೈನಾಳಕರ್, ರಾಜು ಮುಧೋಳ, ಶರಣಪ್ಪ ಸಿದ್ರಾಮಗೋಳ, ಮಾರುತಿ ಇವಣಿ, ಶಿವಪ್ಪ ದೊಡ್ಡಮನಿ, ದಶರಥ ದೊಡ್ಡಮನಿ, ಮಲ್ಲು ಕೊಳಕೋರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

janabhipraya

https://janabhipraya.com

Related Articles

Leave a Reply

Your email address will not be published. Required fields are marked *

Back to top button