ಕಲಬುರಗಿಜಿಲ್ಲೆ ಸುದ್ದಿ

ನೇತ್ರದಾನದಿಂದ ಅಂಧರ ಬಾಳಿಗೆ ಬೆಳಕಾಗಲಿ: ಅಡೂರು ಶ್ರೀನಿವಾಸುಲು

ಕಲಬುರಗಿ: ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸಮಾಜಮುಖಿ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ನೇತ್ರದಾನದಂತಹ ಮಾನವೀಯ ಕಾರ್ಯಗಳ ಮೂಲಕ ಇತರರ ಬದುಕಿಗೆ ಬೆಳಕಾಗುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಅಡೂರು ಶ್ರೀನಿವಾಸುಲು ಹೇಳಿದರು.

ನಗರದ ಎಂ.ಎನ್. ದೇಸಾಯಿ ಪದವಿ ಮಹಾವಿದ್ಯಾಲಯದ ವತಿಯಿಂದ ಬಿ.ಎ., ಬಿ.ಕಾಂ ಹಾಗೂ ಬಿ.ಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಭಾನುವಾರ ಕೊಠಾರಿ ಭವನದಲ್ಲಿ ಆಯೋಜಿಸಿದ್ದ ಸ್ವಾಗತ ಸಮಾರಂಭ ಹಾಗೂ ನೇತ್ರದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘ನೇತ್ರದಾನ ಮಾಡಿ, ಅಂಧರ ಬಾಳಿಗೆ ಬೆಳಕಾಗಿ’ ಎಂಬ ಸಂದೇಶದೊಂದಿಗೆ ನೇತ್ರದಾನದ ಮಹತ್ವದ ಕುರಿತು ಶಿಬಿರದಲ್ಲಿ ಜಾಗೃತಿ ಮೂಡಿಸಲಾಯಿತು. ಸಮಾಜಕ್ಕೆ ಅಗತ್ಯವಿರುವ ಸೇವಾ ಕಾರ್ಯಗಳಲ್ಲಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಕರೆ ನೀಡಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ ಹಾಗೂ ಆರ್‌ಸಿಎಚ್ ಅಧಿಕಾರಿ ಡಾ. ಸಿದ್ದು ಪಾಟೀಲ ಮಾತನಾಡಿದರು. ಹಿರಿಯ ಪತ್ರಕರ್ತ ಬಸವರಾಜ ಚಿನಿವಾರ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಖ್ಯಾತ ನ್ಯಾಯವಾದಿ ರಾಘವೇಂದ್ರ ಕುಲಕರ್ಣಿ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಗಣಪತಿ ಪೂಜಾರಿ, ಪಿಆರ್‌ಇಡಿ ಜೇವರ್ಗಿಯ ಕಿರಿಯ ಎಂಜಿನಿಯರ್ ಶಂಕರಗೌಡ ಪಾಟೀಲ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಬಿ-ಗ್ರೇಡ್) ಹುದ್ದೆ ಉನ್ನತೀಕರಣ ಸಂಘದ ರಾಜ್ಯ ನಿರ್ದೇಶಕಿ ಹಾಗೂ ಕಲಬುರಗಿ ಜಿಲ್ಲಾಧ್ಯಕ್ಷೆ ರಾಜೇಶ್ವರಿ ಸಾಹು ಗೌರವ ಉಪಸ್ಥಿತರಿದ್ದರು.

ಕಾಲೇಜಿನ ಗೌರವಾಧ್ಯಕ್ಷ ಚಂದ್ರಕಾಂತ ಎನ್. ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷ ಸಂದೀಪ ಎಸ್. ದೇಸಾಯಿ, ಕಾರ್ಯದರ್ಶಿ ಜಗನ್ನಾಥ ಎಸ್. ನಾಗೂರ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button