ಕೋಲಿ,ಕಬ್ಬಲಿಗ ನೌಕರರ ಸಮಾವೇಶ, ಪ್ರತಿಭಾ ಪುರಸ್ಕಾರ ಮುಂದೂಡಿಕೆ

ಕಲಬುರಗಿ: ಅಕ್ಟೋಬರ್ 18ರಂದು ಆಯೋಜಿಸಲು ಪೂರ್ವಸಿದ್ಧತೆ ನಡೆಸಲಾಗಿದ್ದ ಕೋಲಿ,ಕಬ್ಬಲಿಗ ನೌಕರರ ಜಿಲ್ಲಾ ಸಮಾವೇಶ, ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನೌಕರರು ಮತ್ತು ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮವನ್ನು ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ.
ಈ ಕುರಿತು ಕೋಲಿ,ಕಬ್ಬಲಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಸಭೆ ಕಲಬುರಗಿ ನಗರದ ಸಪ್ತಗಿರಿ ಆರೆಂಜ್ ಹೋಟೆಲ್ನಲ್ಲಿ ನಡೆಯಿತು. ಸಭೆಯಲ್ಲಿ ಕಾರ್ಯಕ್ರಮವನ್ನು ಮುಂದೂಡುವ ನಿರ್ಧಾರ ಕೈಗೊಳ್ಳಲಾಯಿತು.
ವಿದ್ಯಾರ್ಥಿಗಳು, ಪಾಲಕರು, ನೌಕರರು ಸೇರಿದಂತೆ ಸಮುದಾಯದ ಎಲ್ಲರೂ ಕಾರ್ಯಕ್ರಮಕ್ಕೆ ಸಹಕರಿಸಬೇಕು ಎಂದು ಸಂಘದ ಅಧ್ಯಕ್ಷ ನೀಲಕಂಠ ಎಂ. ಜಮಾದಾರ ಮನವಿ ಮಾಡಿದರು.
ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನವೆಂಬರ್ನಲ್ಲಿ ಆಯೋಜಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕಾರ್ಯಕ್ರಮದ ಪರಿಷ್ಕೃತ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.



