ಮಕ್ಕಳ ಹೃದಯ ಆರೋಗ್ಯ ತಪಾಸಣಾ ಶಿಬಿರ ಸೆ.29ರಂದು

ಕಲಬುರಗಿ: ಮಕ್ಕಳಲ್ಲಿ ಕಂಡುಬರುವ ಕೆಲವು ಹೃದಯ ಕಾಯಿಲೆಗಳು ಜನ್ಮಜಾತ ಹೃದಯ ದೋಷಗಳಿಂದ ಉಂಟಾಗಬಹುದು. ಇಂತಹ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಿದರೆ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ಆದರೆ ಕೆಲ ಮಕ್ಕಳಲ್ಲಿ ಯಾವುದೇ ಸ್ಪಷ್ಟ ಲಕ್ಷಣಗಳಿಲ್ಲದಿದ್ದರೂ ಹೃದಯದ ಸಮಸ್ಯೆಗಳು ಇರುವ ಸಾಧ್ಯತೆ ಇರುವುದರಿಂದ ಪೋಷಕರು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಹರಿದಾಸ್ ಹಾರ್ಟ್ ಆಸ್ಪತ್ರೆ ತಿಳಿಸಿದೆ.
ವಿಶ್ವ ಹೃದಯ ದಿನದ ಅಂಗವಾಗಿ ಮಕ್ಕಳಲ್ಲಿ ಹೃದಯ ಕಾಯಿಲೆಗಳ ಕುರಿತು ಜಾಗೃತಿ ಮೂಡಿಸುವುದು ಹಾಗೂ ಆರಂಭಿಕ ಹಂತದಲ್ಲಿಯೇ ಹೃದಯ ದೋಷಗಳನ್ನು ಪತ್ತೆಹಚ್ಚುವ ಉದ್ದೇಶದಿಂದ ಸೆಪ್ಟೆಂಬರ್ 29ರಂದು ನಗರದ ಸೂಪರ್ ಮಾರ್ಕೆಟ್ ಜವಳಿ ಕಾಂಪ್ಲೆಕ್ಸ್ನಲ್ಲಿರುವ ಹರಿದಾಸ್ ಹಾರ್ಟ್ ಆಸ್ಪತ್ರೆಯಲ್ಲಿ ಉಚಿತ ಮಕ್ಕಳ ಹೃದಯ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.
ಶಿಬಿರದಲ್ಲಿ 5ರಿಂದ 15 ವರ್ಷ ವಯಸ್ಸಿನ ಮಕ್ಕಳಿಗೆ ವಿಶೇಷ ಹೃದಯ ತಪಾಸಣೆ ನಡೆಸಲಾಗುವುದು. ಆಟವಾಡುವಾಗ ಬೇಗನೆ ದಣಿಯುವುದು, ಉಸಿರಾಟದ ತೊಂದರೆ, ಪದೇಪದೇ ಶ್ವಾಸಕೋಶದ ಸೋಂಕು ಕಾಣಿಸಿಕೊಳ್ಳುವುದು, ತೂಕ ಸರಿಯಾಗಿ ಹೆಚ್ಚಾಗದಿರುವುದು, ತುಟಿ ಅಥವಾ ಬೆರಳುಗಳು ನೀಲಿ ಬಣ್ಣಕ್ಕೆ ತಿರುಗುವುದು, ತಲೆಸುತ್ತುವುದು ಹಾಗೂ ಮೂರ್ಛೆ ಹೋಗುವಂತಹ ಲಕ್ಷಣಗಳು ಕಂಡುಬಂದರೆ ಪೋಷಕರು ಮಕ್ಕಳನ್ನು ಹೃದಯ ತಪಾಸಣೆಗೆ ಒಳಪಡಿಸಬೇಕು ಎಂದು ಆಸ್ಪತ್ರೆ ಸಲಹೆ ನೀಡಿದೆ.
ಯಾವುದೇ ಸ್ಪಷ್ಟ ಲಕ್ಷಣಗಳಿಲ್ಲದಿದ್ದರೂ ಹೃದಯದ ದೋಷಗಳು ಇರುವ ಸಾಧ್ಯತೆ ಇರುವ ಮಕ್ಕಳಿಗೆ ವೈದ್ಯಕೀಯ ತಪಾಸಣೆಯ ಜತೆಗೆ ಅಗತ್ಯವಿದ್ದಲ್ಲಿ ಎಕೋಕಾರ್ಡಿಯೋಗ್ರಫಿ (ECHO) ಪರೀಕ್ಷೆಯನ್ನು ಉಚಿತವಾಗಿ ನಡೆಸಲಾಗುವುದು.
ಖ್ಯಾತ ಹೃದಯ ಮತ್ತು ಎದೆ ಶಸ್ತ್ರಚಿಕಿತ್ಸಕರಾದ ಡಾ. ಅರುಣ್ ಕುಮಾರ್ ಹರಿದಾಸ್ ಅವರು ಶಿಬಿರದಲ್ಲಿ ಮಕ್ಕಳಿಗೆ ಉಚಿತ ವೈದ್ಯಕೀಯ ಸಮಾಲೋಚನೆ ನೀಡಲಿದ್ದಾರೆ.
‘ಮಗುವಿನ ಹೃದಯದ ಆರೋಗ್ಯ–ಮಗುವಿನ ಆರೋಗ್ಯಕರ ಭವಿಷ್ಯ’ ಎಂಬ ಸಂದೇಶದೊಂದಿಗೆ ಶಿಬಿರ ಆಯೋಜಿಸಲಾಗಿದೆ. ಪೋಷಕರು ಈ ಉಚಿತ ಶಿಬಿರದ ಸದುಪಯೋಗ ಪಡೆದುಕೊಂಡು ತಮ್ಮ ಮಕ್ಕಳ ಹೃದಯ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಆಸ್ಪತ್ರೆ ಆಡಳಿತ ಮಂಡಳಿ ಮನವಿ ಮಾಡಿದೆ.



