ಚಿತ್ರ ಸುದ್ದಿ

ಖರ್ಗೆ ಅವಮಾನ ಖಂಡಿಸಿ ಆ.18ರಂದು ಚಿತ್ತಾಪುರದಲ್ಲಿ ರಸ್ತೆ ತಡೆ

ಚಿತ್ತಾಪುರ: ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಮಲೀಲಾ ಮೈದಾನದಲ್ಲಿ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ, ಘಟನೆಯನ್ನು ಖಂಡಿಸಿ ಆ.18ರಂದು ಬೆಳಿಗ್ಗೆ 11ಕ್ಕೆ ಪಟ್ಟಣದ ಲಾಡ್ಡಿಂಗ್ ಕ್ರಾಸ್ ಬಳಿ ರಸ್ತೆ ತಡೆ ಪ್ರತಿಭಟನೆ ನಡೆಸಲಾಗುವುದು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ತಿಳಿಸಿದರು.

ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖರ್ಗೆ ಅವರು ದಲಿತರು ಎಂಬ ಕಾರಣಕ್ಕೆ ಅವರು ಭಾಗವಹಿಸಿದ್ದ ಸ್ಥಳವನ್ನು ಆರ್‌ಎಸ್‌ಎಸ್‌, ವಿಎಚ್‌ಪಿ ಹಾಗೂ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಗಂಗಾಜಲದಿಂದ ಶುದ್ಧೀಕರಿಸಿರುವುದು ಸ್ವಾತಂತ್ರ್ಯ ಭಾರತದಲ್ಲಿ ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆ. ಇದನ್ನು ಕಾಂಗ್ರೆಸ್‌ ಪಕ್ಷ ಬಲವಾಗಿ ಖಂಡಿಸುತ್ತದೆ ಎಂದರು.

ದೇಶಕ್ಕೆ ಸ್ವಾತಂತ್ರ್ಯ ದೊರೆತು 80 ವರ್ಷಗಳಾದರೂ ಕೆಲವರು ಮನುವಾದಿ ಮನಸ್ಥಿತಿಯಿಂದ ಹೊರಬರದಿರುವುದು ನಾಚಿಕೆಗೇಡಿನ ಸಂಗತಿ. ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು. ಯಾವುದೇ ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಅವರು ಹೇಳಿದರು.

ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮುಕ್ತಾರ್ ಪಟೇಲ್ ಮಾತನಾಡಿ, ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾಡಿದ ಅವಮಾನ ದೇಶದ ಜನತೆ ತಲೆತಗ್ಗಿಸುವಂತಹದ್ದು. ಘಟನೆಯನ್ನು ಖಂಡಿಸಿ ಸಮಾನ ಮನಸ್ಕರೊಂದಿಗೆ ರಸ್ತೆ ತಡೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಪುರಸಭೆ ಮಾಜಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಕಾಳಗಿ, ಚಂದ್ರಶೇಖರ ಕಾಶಿ, ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮನಳ್ಳಿ, ಯುವ ಅಧ್ಯಕ್ಷ ದೇವಿಂದ್ರ ಯಾಬಾಳ, ನಾಗರೆಡ್ಡಿ ಗೋಪಸೇನ್, ರಸೂಲ್ ಮುಸ್ತಫಾ, ಮಲ್ಲಿಕಾರ್ಜುನ ಮುಡಬೂಳಕರ್, ದೇವಿಂದ್ರ ಕುಮಸಿ, ನಾಗಯ್ಯ ಗುತ್ತೇದಾರ, ಈರಪ್ಪ ಭೋವಿ, ಸಂಜಯ ಬುಳಕರ್, ಭೀಮಸಿಂಗ ಚವ್ಹಾಣ, ನಜೀರ್ ಆಡಕಿ, ಸುಭಾಷ್ ಕಲ್ಮರಿ ಸೇರಿದಂತೆ ಇತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button