ಮತದಾರರ ಹಕ್ಕು ರಕ್ಷಣೆಗೆ ಕಲಬುರಗಿಯಲ್ಲಿ ವೆಲ್ಫೇರ್ ಪಾರ್ಟಿ ಧರಣಿ

ಕಲಬುರಗಿ, ಆ.15: ಮತದಾರರ ಹಕ್ಕುಗಳ ರಕ್ಷಣೆ ಹಾಗೂ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅರ್ಹ ಮತದಾರರ ಹೆಸರುಗಳನ್ನು ಅನ್ಯಾಯವಾಗಿ ಕೈಬಿಡದಂತೆ ಒತ್ತಾಯಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ನಗರದಲ್ಲಿ ಧರಣಿ ನಡೆಸಲಾಯಿತು.
ದೇಶದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ‘ನನ್ನ ಮತ–ನನ್ನ ಹಕ್ಕು’ ಘೋಷಣೆಯೊಂದಿಗೆ ನಡೆದ ಪ್ರತಿಭಟನೆಯಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಮೂಬೀನ್ ಅಹ್ಮದ್, ಜಿಲ್ಲಾ ಅಧ್ಯಕ್ಷ ಸಲೀಂ ಅಹ್ಮದ್ ಚಿತ್ತಾಪುರಿ, JAC ಕಾರ್ಯದರ್ಶಿ ಅಫ್ಜಲ್ ಮೆಹಮೂದ್, ಸಾಮಾಜಿಕ ಕಾರ್ಯಕರ್ತ ಅಯ್ಯುಬ್ ಖಾನ್, ಜಿಲ್ಲಾ ಕಾರ್ಯದರ್ಶಿ ಅಡ್ವೊಕೇಟ್ ಅಬ್ದುಲ್ ಖಾದರ್, ಹೈದರ್ ಅಲಿ ಬಾಗ್ಬಾನ್, ನಗರ ಅಧ್ಯಕ್ಷ ಮುನೀರ್ ಹಾಶ್ಮಿ, ಜಿಲ್ಲಾ ಸಮಿತಿ ಸದಸ್ಯ ನಸೀರುದ್ದೀನ್ ಸಾಹೇಬ್, ಯುವ ಅಧ್ಯಕ್ಷ ಫಹಾದ್ ಮೊಹ್ಸಿನ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ಸಾಮಾಜಿಕ ಹೋರಾಟಗಾರರು ಪಾಲ್ಗೊಂಡಿದ್ದರು.
ಜಿಲ್ಲಾ ಅಧ್ಯಕ್ಷ ಸಲೀಂ ಅಹ್ಮದ್ ಚಿತ್ತಾಪುರಿ ಮಾತನಾಡಿ, SIR ಪ್ರಕ್ರಿಯೆಯ ಹೆಸರಿನಲ್ಲಿ ಯಾವುದೇ ಅರ್ಹ ಮತದಾರರ ಹೆಸರನ್ನು ಕೈಬಿಡಬಾರದು. ಮತದಾರರ ಪಟ್ಟಿ ಪರಿಷ್ಕರಣೆಯನ್ನು ಸಂಪೂರ್ಣ ಪಾರದರ್ಶಕವಾಗಿ ನಡೆಸಬೇಕು. ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ತನ್ನ ಹೆಸರು ಪಟ್ಟಿಯಲ್ಲಿ ಇರುವುದನ್ನು ಪರಿಶೀಲಿಸಿಕೊಳ್ಳಲು ಹಾಗೂ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಕಾರ್ಯದರ್ಶಿ ಮೂಬೀನ್ ಅಹ್ಮದ್ ಮಾತನಾಡಿ, ಸ್ವಾತಂತ್ರ್ಯ ಪಡೆದು 80 ವರ್ಷಗಳಾದರೂ ಸಂವಿಧಾನ ನೀಡಿರುವ ಮತದಾನದ ಹಕ್ಕಿನ ರಕ್ಷಣೆಗಾಗಿ ಹೋರಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮತದಾನವು ಕೇವಲ ಹಕ್ಕಲ್ಲ, ಅದು ಸಂವಿಧಾನಾತ್ಮಕ ಹಕ್ಕಾಗಿದೆ. SIR ಪ್ರಕ್ರಿಯೆಯಲ್ಲಿ ಸ್ಥಳಾಂತರ, ದಾಖಲೆಗಳ ಕೊರತೆ ಅಥವಾ ಇತರ ಕಾರಣಗಳಿಂದ ಅರ್ಹ ಮತದಾರರ ಹೆಸರುಗಳು ತಪ್ಪಾಗಿ ಕೈಬೀಳದಂತೆ ಸರ್ಕಾರ ಮತ್ತು ಚುನಾವಣಾ ಆಯೋಗ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
SIR ಪ್ರಕ್ರಿಯೆಯಿಂದ ರಾಜ್ಯದಲ್ಲಿ ಸುಮಾರು ಒಂದು ಕೋಟಿ ಮತದಾರರ ಹೆಸರುಗಳು ಅಳಿಸಿಹೋಗುವ ಆತಂಕವಿದೆ ಎಂದು ಪಕ್ಷದ ಮುಖಂಡರು ಕಳವಳ ವ್ಯಕ್ತಪಡಿಸಿದರು. ಕಲಬುರಗಿ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು ಮೂರು ಲಕ್ಷ ಮತದಾರರ ಹೆಸರುಗಳನ್ನು ಕೈಬಿಡುವ ಸಾಧ್ಯತೆ ಇದೆ ಎಂಬ ವರದಿಗಳ ಬಗ್ಗೆಯೂ ಆತಂಕ ವ್ಯಕ್ತಪಡಿಸಿದ ಅವರು, ಪ್ರತಿಯೊಂದು ಹೆಸರನ್ನೂ ಸೂಕ್ತವಾಗಿ ಪರಿಶೀಲಿಸಿದ ಬಳಿಕವೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
‘ನನ್ನ ಮತ–ನನ್ನ ಹಕ್ಕು, ನನ್ನ ಮತ-ನನ್ನ ಧ್ವನಿ, ನನ್ನ ಮತ-ನನ್ನ ಭವಿಷ್ಯ’ ಎಂಬ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡುವ ಮೊದಲು ಸಂಬಂಧಪಟ್ಟವರಿಗೆ ಸೂಕ್ತ ನೋಟಿಸ್ ನೀಡಬೇಕು. ಆಕ್ಷೇಪಣೆ ಸಲ್ಲಿಸಲು ಸಮರ್ಪಕ ಅವಕಾಶ ಕಲ್ಪಿಸಿ, ಸಂಪೂರ್ಣ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಬೇಕು ಎಂದು ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ಮನವಿ ಮಾಡಿದರು.



