ಯಾದಗಿರಿ

ಸಂಘಟನೆಕಾರರು ಶೋಷಿತರ ಧ್ವನಿಯಾಗಿ ಕಾರ್ಯನಿರ್ವಹಿಸಬೇಕು: ಶಿವಶರಣಪ್ಪ ವಾಡಿ

ಕೆಂಭಾವಿ: ಶೋಷಿತರು, ದಲಿತರು ಹಾಗೂ ದಮನಿತ ವರ್ಗಗಳ ಪರವಾಗಿ ಸಂಘಟನೆಕಾರರು ಸದಾ ದೃಢ ಧ್ವನಿಯಾಗಿ ನಿಂತು ಹೋರಾಟ ನಡೆಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ (ಭೀಮವಾದ) ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಶಿವಶರಣಪ್ಪ ವಾಡಿ ಹೇಳಿದರು.

ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಮಹಾನಾಯಕ ವೃತ್ತದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಸಂಘಟನೆಯು ನನ್ನ ಮೇಲಿಟ್ಟಿರುವ ನಂಬಿಕೆ ಹಾಗೂ ವಿಶ್ವಾಸದಿಂದಾಗಿ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ. ಹೋಬಳಿ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಸಂಘಟನಾ ಸಂಚಾಲಕನಾಗಿ ಕಾರ್ಯನಿರ್ವಹಿಸುತ್ತಾ ಬಂದಿರುವುದು ತೃಪ್ತಿ ತಂದಿದೆ. ಮುಂದಿನ ದಿನಗಳಲ್ಲಿಯೂ ಶೋಷಿತರು, ದಲಿತರು ಹಾಗೂ ದಮನಿತ ವರ್ಗಗಳ ಪರವಾಗಿ ನಿರಂತರವಾಗಿ ಧ್ವನಿ ಎತ್ತಿ ಹೋರಾಟ ನಡೆಸುತ್ತೇನೆ’ ಎಂದು ಹೇಳಿದರು.

‘ಹೋಬಳಿ ಮಟ್ಟದಿಂದ ರಾಜ್ಯ ಸಂಘಟನಾ ಸಂಚಾಲಕನಾಗಿ ಆಯ್ಕೆಯಾಗುವವರೆಗೆ ಸಹಕಾರ, ಮಾರ್ಗದರ್ಶನ ನೀಡಿದ ಸಮಸ್ತ ಹಿರಿಯ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ ಕೃತಜ್ಞನಾಗಿದ್ದೇನೆ’ ಎಂದರು.

ಸನ್ಮಾನ: ರಾಜ್ಯ ಸಮಿತಿಯ ನೂತನ ಸಂಘಟನಾ ಸಂಚಾಲಕರಾಗಿ ಆಯ್ಕೆಯಾದ ಶಿವಶರಣಪ್ಪ ವಾಡಿ, ಶ್ರೀಮತಿ ಮಂಜುಳಾ, ಶ್ರೀಮತಿ ಜ್ಯೋತಿ ಕೊಡೇಕಲ್, ಶ್ರೀಮತಿ ಪವಿತ್ರ ವಾಡಿ, ಶ್ರೀಮತಿ ಮಾಯಾ, ಜಿಲ್ಲಾ ಸಂಘಟನಾ ಸಂಚಾಲಕ ಮರೆಪ್ಪ ಮಾಳಳ್ಳಿಕರ್ ಹದನೂರ ಹಾಗೂ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಡಾ. ಪರಶುರಾಮ್ ಸಿ.ಎಂ. ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಶಿಕ್ಷಕಿ ಶ್ರೀಮತಿ ನೀಲಮ್ಮ ಬಿ. ಮಲ್ಲೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಕೆಂಭಾವಿಯ ದಲಿತರ ಬಳಗದ ಸದಸ್ಯರು, ವಿವಿಧ ದಲಿತ ಸಂಘಟನೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಸಮಾಜದ ಮುಖಂಡರು, ಸಂಘಟನೆಯ ಪ್ರಮುಖರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button