ಖರ್ಗೆ ಅವರಿಗೆ ಅವಮಾನ ಖಂಡಿಸಿ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ
ಜಾತಿವಾದಿ ಕೃತ್ಯಗಳ ವಿರುದ್ಧ ಕಾನೂನು ಜಾಗೃತಿ ಸಂಘದಿಂದ ಕೇಂದ್ರ ಗೃಹ ಸಚಿವರಿಗೆ ಒತ್ತಾಯ

ಕಲಬುರಗಿ: ಉತ್ತರಾಖಂಡದ ಪಟ್ಟಣವೊಂದರಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿದ್ದ ಸ್ಥಳವನ್ನು ಬಳಿಕ ಗಂಗಾಜಲದಿಂದ ಶುದ್ಧೀಕರಿಸಿ ಹೋಮ–ಹವನ ನಡೆಸಿದ ಘಟನೆ ಖಂಡನೀಯ ಎಂದು ಕರ್ನಾಟಕ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವಕೀಲರ ಕಾನೂನು ಜಾಗೃತಿ ಸಂಘ ಆಕ್ರೋಶ ವ್ಯಕ್ತಪಡಿಸಿದೆ.
2026ರ ಆಗಸ್ಟ್ 8ರಂದು ಉತ್ತರಾಖಂಡದ ರಾಮಲೀಲಾ ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿ ಮಾತನಾಡಿದ್ದರು. ಇದಾದ ಎರಡು ದಿನಗಳ ಬಳಿಕ ಕೆಲವರು ಅವರು ನಿಂತು ಮಾತನಾಡಿದ್ದ ಸ್ಥಳವನ್ನು ಗಂಗಾಜಲದಿಂದ ಸಿಂಪಡಿಸಿ ಶುದ್ಧೀಕರಣ ನಡೆಸಿರುವುದು ಜಾತೀಯ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ಇಂತಹ ಕೃತ್ಯಗಳು ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿವೆ ಎಂದು ಸಂಘದ ಜಿಲ್ಲಾಧ್ಯಕ್ಷ ವಿನೋದಕುಮಾರ ಕಾಂಬಳೆ ತಿಳಿಸಿದ್ದಾರೆ.
ದೇಶ ಸ್ವಾತಂತ್ರ್ಯ ಪಡೆದು ಹಲವು ದಶಕಗಳು ಕಳೆದಿದ್ದರೂ ಜಾತೀಯತೆ ಮತ್ತು ಅಸ್ಪೃಶ್ಯತೆಯ ಮನೋಭಾವಗಳು ಮುಂದುವರಿದಿರುವುದು ವಿಷಾದನೀಯ. ಇಂತಹ ಘಟನೆಗಳು ಸಂವಿಧಾನದ ಸಮಾನತೆ ಹಾಗೂ ಅಸ್ಪೃಶ್ಯತೆ ನಿರ್ಮೂಲನೆಯ ಆಶಯಗಳಿಗೆ ಧಕ್ಕೆ ತರುತ್ತವೆ ಎಂದು ಅವರು ಹೇಳಿದ್ದಾರೆ.
ಕಠಿಣ ಕಾನೂನು ಕ್ರಮಕ್ಕೆ ಆಗ್ರಹ
ಘಟನೆಗೆ ಸಂಬಂಧಿಸಿದವರ ವಿರುದ್ಧ ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವುದರ ಜತೆಗೆ ಅಗತ್ಯವಿದ್ದಲ್ಲಿ ಕಾನೂನುಬದ್ಧವಾಗಿ ಗಡಿಪಾರು ಕ್ರಮ ಕೈಗೊಳ್ಳಬೇಕು ಎಂದು ಸಂಘ ಒತ್ತಾಯಿಸಿದೆ.
ದೇಶದ ವಿವಿಧ ಭಾಗಗಳಲ್ಲಿ ಪರಿಶಿಷ್ಟ ಜಾತಿಯ ಜನರ ಮೇಲೆ ಅಸ್ಪೃಶ್ಯತೆ, ಅವಮಾನ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಘಟನೆಗಳು ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆ. ಈ ಹಿನ್ನೆಲೆಯಲ್ಲಿ ನಾಗರಿಕ ಹಕ್ಕುಗಳ ಸಂರಕ್ಷಣೆ ಕಾಯ್ದೆ, 1955 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ, 1989 ಸೇರಿದಂತೆ ಸಂಬಂಧಿತ ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಬಾಬು ಜಗಜೀವನರಾಮ್ ಅವರಿಗೆ ಪುರಿ ಜಗನ್ನಾಥ ದೇವಸ್ಥಾನದಲ್ಲಿ ಜಾತಿ ಆಧಾರಿತ ಅವಮಾನ ಎದುರಾದ ಘಟನೆ ಹಾಗೂ ಮಾಜಿ ಕೇಂದ್ರ ಸಚಿವರಿಗೆ ಗ್ರಾಮ ಪ್ರವೇಶ ನಿರಾಕರಿಸಿದ ಘಟನೆಗಳನ್ನೂ ಸಂಘ ಉಲ್ಲೇಖಿಸಿದೆ.
ಈ ಕುರಿತು ಸಂಘದ ಉಪಾಧ್ಯಕ್ಷರಾದ ಸೀತಾರಾಮ ಓಮಲಾ ರಾಠೋಡ, ಭಾವಿಮನಿ ಆಶಾ ಮಂಗೇಶ, ಪ್ರಧಾನ ಕಾರ್ಯದರ್ಶಿ ಕುಸುಮಾಕರ ಎಸ್. ಮಹಾಗಾಂವಿ, ಜಂಟಿ ಕಾರ್ಯದರ್ಶಿಗಳಾದ ವಿಶ್ವನಾಥ ಎಂ. ಸಿಂಗೆ ಹಾಗೂ ಧೂಳಪ್ಪ ಬಿ. ದ್ಯಾಮನಕರ್ ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.



