ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಕೇತ ಜಚ್ಚಾ ಮಾಸಾಬಿ ಜಾತ್ರೆ

ಕೆಂಭಾವಿ: ಪಟ್ಟಣದ ಹಿಂದೂ–ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿರುವ ಜಚ್ಚಾ ಮಾಸಾಬಿ ದರ್ಗಾದ 519ನೇ ಜಾತ್ರಾ ಮಹೋತ್ಸವಕ್ಕೆ ಶನಿವಾರ (ಆ.29) ಗಂಧದ ಕಾರ್ಯಕ್ರಮದೊಂದಿಗೆ ಚಾಲನೆ ದೊರೆಯಲಿದೆ.
ನೂರಾರು ವರ್ಷಗಳ ಇತಿಹಾಸ ಹೊಂದಿರುವ ಜಚ್ಚಾ ಮಾಸಾಬಿ ದರ್ಗಾದ ಉರುಸ್, ಸರ್ವಧರ್ಮದ ಜನರು ಒಗ್ಗೂಡಿ ಆಚರಿಸುವ ಪ್ರಮುಖ ಧಾರ್ಮಿಕ ಕಾರ್ಯಕ್ರಮವಾಗಿದೆ. ವಚನಕಾರ ಭೋಗಣ್ಣ ಹಾಗೂ ರೇವಣಸಿದ್ದೇಶ್ವರರ ನೆಲೆಯಾಗಿರುವ ಕೆಂಭಾವಿ ಭಾವೈಕ್ಯತೆಗೆ ಹೆಸರಾಗಿದ್ದು, ಜಾತ್ರೆಯಲ್ಲಿ ವಿವಿಧ ಸಮುದಾಯಗಳ ಹಿರಿಯರು, ಮುಖಂಡರು ಹಾಗೂ ಯುವಕರು ಪಾಲ್ಗೊಳ್ಳಲಿದ್ದಾರೆ.
ಆ.29ರಂದು ರಾತ್ರಿ 10ಕ್ಕೆ ಕಾಜಿ ಬಡಾವಣೆಯಿಂದ ಗಂಧದ ಮೆರವಣಿಗೆ ಆರಂಭವಾಗಲಿದೆ. ಬಾಜಾ–ಬಜಂತ್ರಿ, ಕವ್ವಾಲಿ ಗಾಯನದೊಂದಿಗೆ ಮುಖ್ಯ ಬಜಾರ್ ಮಾರ್ಗವಾಗಿ ಸಾಗುವ ಮೆರವಣಿಗೆ ರಾತ್ರಿ ಸುಮಾರು 2ಕ್ಕೆ ದರ್ಗಾ ತಲುಪಲಿದೆ. ಬಳಿಕ ದರ್ಗಾದ ಸಜ್ಜಾದ ನಶೀನರಾದ ಹಜರತ್ ಶಾ ಮಹಬೂಬ್ ಪಾಷಾ ಖಾಜಿ ಅವರ ನೇತೃತ್ವದಲ್ಲಿ ಸಂಪ್ರದಾಯದಂತೆ ಗಂಧ ಲೇಪನ ಕಾರ್ಯಕ್ರಮ ನಡೆಯಲಿದೆ.
ಆ.30ರಂದು ದೀಪೋತ್ಸವ ಹಾಗೂ ರಾತ್ರಿ ಪ್ರಸಿದ್ಧ ಕವ್ವಾಲಿ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ. ಆ.31ರಂದು ಕಿಸ್ತಿ (ಜಿಯಾರತ್) ಕಾರ್ಯಕ್ರಮ ನಡೆಯಲಿದೆ.
ಜಾತ್ರೆಯ ಅಂಗವಾಗಿ ಪಟ್ಟಣದಲ್ಲಿ ಜೋಕಾಲಿ, ಮಕ್ಕಳ ಆಟಿಕೆಗಳು ಸೇರಿದಂತೆ ವಿವಿಧ ಅಂಗಡಿಗಳು ಬೀಡುಬಿಟ್ಟಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಜಾತ್ರೆಯ ಸಂದರ್ಭದಲ್ಲಿ ಭಕ್ತರು ತಮ್ಮ ಮನೆಗಳಲ್ಲಿ ಕಡಬು, ಲಾಡು, ಹೋಳಿಗೆ, ಮಾದಲಿ, ಸಕ್ಕರೆ ತೆಂಗು, ಅಗರಬತ್ತಿ, ಅಡಿಕೆ ಸೇರಿದಂತೆ ವಿವಿಧ ನೈವೇದ್ಯಗಳನ್ನು ಅರ್ಪಿಸಿ ತಮ್ಮ ಹರಕೆ ಹಾಗೂ ಬಯಕೆಗಳನ್ನು ಸಲ್ಲಿಸುವುದು ವಾಡಿಕೆಯಾಗಿದೆ.
ಪಟ್ಟಣದ ಜನರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರೆಯಲ್ಲಿ ಪಾಲ್ಗೊಂಡು ತಾಯಿ ಜಚ್ಚಾ ಮಾಸಾಬಿಯ ಕೃಪೆಗೆ ಪಾತ್ರರಾಗಬೇಕು ಎಂದು ದರ್ಗಾದ ಸಜ್ಜಾದ ನಶೀನರು ತಿಳಿಸಿದ್ದಾರೆ.



