ಕೇಸರಿಬೆಟ್ಟದಲ್ಲಿ ಶ್ರಾವಣ ಮಾಸದ ತಪೋನುಷ್ಠಾನ: ಭಕ್ತರ ಭವ್ಯ ಮೆರವಣಿಗೆ

ಕಲಬುರಗಿ: ನಗರದ ಜೇವರ್ಗಿ ರಸ್ತೆಯ ಕೇಸರಿಬೆಟ್ಟದಲ್ಲಿರುವ ಶ್ರೀ ಸಾಂಬಶಿವಯೋಗೀಶ್ವರ ಸಂಸ್ಥಾನ ಹಿರೇಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಆ.13ರಿಂದ ಸೆ.12ರವರೆಗೆ ತಪೋನುಷ್ಠಾನ, ಮಹಾಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಪ್ರತಿ ಸೋಮವಾರ ವಿಶೇಷ ಇಷ್ಟಲಿಂಗ ಪೂಜೆ ಹಾಗೂ ಇಷ್ಟಲಿಂಗ ತುಲಾಭಾರ ಕಾರ್ಯಕ್ರಮಗಳು ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಧಾರ್ಮಿಕ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ನಿಟ್ಟೂರು ಗ್ರಾಮದಿಂದ ಭಕ್ತರು ಭವ್ಯ ಮೆರವಣಿಗೆಯ ಮೂಲಕ ಜೇವರ್ಗಿ ರಸ್ತೆಯಲ್ಲಿರುವ ಕೇಸರಿಬೆಟ್ಟಕ್ಕೆ ಆಗಮಿಸಿದರು. ಮೆರವಣಿಗೆಯಲ್ಲಿ ಸಾಂಬ ಸೇನೆ ಭಕ್ತ ಮಂಡಳಿ ಹಾಗೂ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.
‘ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’, ‘ಸಾಹಿತ್ಯ ಸಂಸ್ಕೃತಿ ಸಂವರ್ಧಿಸಲಿ, ಶಾಂತಿ ಸಮೃದ್ಧಿ ಸರ್ವರಿಗಾಗಲಿ’ ಎಂಬ ಸಂದೇಶಗಳೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.
‘ಉಪಾಚಾರ್ಯ ರತ್ನ’, ‘ತಪೋರತ್ನ’ ಬಾಲತಪಸ್ವಿ ದ್ವಿತೀಯ ಸಾಂಬ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಕಾರ್ಯಕ್ರಮಗಳು ಜರುಗುತ್ತಿವೆ. ಶ್ರಾವಣ ಮಾಸದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಪುಣ್ಯಪ್ರಸಾದ ಪಡೆದುಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಶರಣಗೌಡ ಪಾಟೀಲ, ಸುಮಿತ್ ನಾಗನಹಳ್ಳಿ, ಮಂಜು ಕೆಂಭಾವಿ, ಅಬ್ರಣ್ಣ ಸಜ್ಜನ, ಈರಣ್ಣ ಕೆಂಭಾವಿ, ಆಶಿಸ್ ಪುನಾ ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.



