ಹಣಕ್ಕಾಗಿ ಕಿರುಕುಳ ಆರೋಪ: ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ, ಸೆ. 2: ಹಣ ನೀಡುವಂತೆ ಕಿರುಕುಳ ನೀಡಿ, ಜೀವ ಬೆದರಿಕೆ ಹಾಕಿ ನಾಲ್ಕು ಚೆಕ್ಗಳನ್ನು ಬಲವಂತವಾಗಿ ಪಡೆದಿದ್ದಾರೆ ಎಂದು ಆರೋಪಿಸಿ ಕಲಬುರಗಿ ನಗರದ ಕರುಣೇಶ್ವರ ಬಡಾವಣೆ ನಿವಾಸಿ ಬಲರಾಮ್ ತಾಂಡೆ ರಾಣಪ್ಪ ಹಾಗೂ ಅವರ ಕುಟುಂಬದ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು.
ಯಾದಗಿರಿ ಜಿಲ್ಲೆಯ ರೈತ ಸಂಘದ ಮುಖಂಡ ರವಿ ರಾಠೋಡ್ ಹಾಗೂ ಸೇಡಂ ತಾಲ್ಲೂಕಿನ ಕಲಕಂಬಾ ಗ್ರಾಮದ ಶಶಿಕಾಂತ್ ಅವರ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ನ್ಯಾಯವಾದಿ ರವಿಚಂದ್ರ ಗುತೇದಾರ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಶ್ರೀಕಾಂತರೆಡ್ಡಿ, ಲಕ್ಷ್ಮೀಕಾಂತ ಸ್ವಾದಿ, ಬಸವರಾಜ ಬಾಡಿಯಾಳ, ವಿನೋದ್ ಸುಲ್ತಾನಪುರ, ಹೀರಾ ಮಂಕಳ್ಳರ್, ನಾಗೇಂದ್ರಪ್ಪ ತಂಬೆ, ಜಗದೇವಿ ಪೂಜಾರಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರತಿಭಟನಾಕಾರರ ಪ್ರಕಾರ, ಬಲರಾಮ್ ಅವರು ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಹಲವು ವರ್ಷಗಳಿಂದ ನಗರದಲ್ಲಿ ವಾಸವಾಗಿದ್ದು, ಸಣ್ಣಪುಟ್ಟ ವ್ಯವಹಾರ ನಡೆಸುತ್ತಿದ್ದಾರೆ. ಶಶಿಕಾಂತ್ ಅವರೊಂದಿಗೆ ವ್ಯವಹಾರಿಕವಾಗಿ ಹಣ ಹೂಡಿಕೆ ಮಾಡಿದ್ದು, ಕೆಲ ತಿಂಗಳ ಬಳಿಕ ವ್ಯವಹಾರದಲ್ಲಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ.
ಬಲರಾಮ್ ಅವರು ಹಂತ ಹಂತವಾಗಿ ಶಶಿಕಾಂತ್ ಅವರಿಗೆ ಸುಮಾರು ₹54 ಲಕ್ಷ ನೀಡಿದ್ದು, ಮೌಖಿಕವಾಗಿ ಇನ್ನಷ್ಟು ಹಣದ ವ್ಯವಹಾರವೂ ನಡೆದಿತ್ತು ಎಂದು ಆರೋಪಿಸಲಾಗಿದೆ. ಬಳಿಕ ಶಶಿಕಾಂತ್ ಅವರು ರವಿ ರಾಠೋಡ್ ಅವರೊಂದಿಗೆ ಸೇರಿಕೊಂಡು ದೂರವಾಣಿ ಮೂಲಕ ಕಿರುಕುಳ ನೀಡುವುದು, ಮನೆಗೆ ಬಂದು ಬೆದರಿಸುವುದು ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸುವುದು ಮಾಡಿದ್ದಾರೆ ಎಂದು ಬಲರಾಮ್ ಆರೋಪಿಸಿದ್ದಾರೆ.
ಇತ್ತೀಚೆಗೆ ನಗರದ ಚೌಕ್ ಪೊಲೀಸ್ ಠಾಣೆ ಸಮೀಪದ ಹೋಟೆಲ್ಗೆ ಬಲರಾಮ್ ಅವರನ್ನು ಕರೆಸಿಕೊಂಡು ಬೆದರಿಸಿ, ಅವರ ಹೆಸರಿನಲ್ಲಿದ್ದ ಐಸಿಐಸಿಐ ಬ್ಯಾಂಕ್ ಖಾತೆಯ ನಾಲ್ಕು ಚೆಕ್ಗಳನ್ನು ಬಲವಂತವಾಗಿ ಪಡೆದುಕೊಂಡಿದ್ದಾರೆ ಎಂದು ದೂರಲಾಗಿದೆ. ಈ ಕುರಿತು ಪೊಲೀಸರಿಗೆ ದೂರು ನೀಡಿದರೆ ಬಲರಾಮ್ ಹಾಗೂ ಅವರ ಪತ್ನಿ, ಮಕ್ಕಳಿಗೆ ತೊಂದರೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಇದಲ್ಲದೆ, ರವಿ ರಾಠೋಡ್ ಅವರು ₹78 ಲಕ್ಷ ನೀಡಬೇಕಿದ್ದು, ಹಣ ಪಾವತಿಸದಿದ್ದರೆ ಯಾದಗಿರಿ ಸೇರಿದಂತೆ ವಿವಿಧೆಡೆ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ನಿರಂತರವಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಬಲರಾಮ್ ಹಾಗೂ ಅವರ ಕುಟುಂಬದವರು ಜೀವ ಬೆದರಿಕೆ ಮತ್ತು ಮಾನಸಿಕ ಒತ್ತಡದಲ್ಲಿದ್ದಾರೆ. ನಾಲ್ಕು ಚೆಕ್ಗಳನ್ನು ದುರುಪಯೋಗಪಡಿಸಿಕೊಳ್ಳದಂತೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಬಲರಾಮ್ ಕುಟುಂಬದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆ ನಡೆಸಬೇಕು. ಆರೋಪಿಗಳ ಪ್ರಭಾವ ಅಥವಾ ರಾಜಕೀಯ ಹಸ್ತಕ್ಷೇಪಕ್ಕೆ ಒಳಗಾಗದೆ ಕಾನೂನುಬದ್ಧ ಕ್ರಮ ಕೈಗೊಂಡು ಕುಟುಂಬಕ್ಕೆ ಸೂಕ್ತ ಪೊಲೀಸ್ ರಕ್ಷಣೆ ನೀಡಬೇಕು ಎಂದು ಪ್ರತಿಭಟನಾಕಾರರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.



