ಮುದ್ದು ಕೃಷ್ಣನ ಬಾಲಲೀಲೆಗೆ ಮಾರುಹೋದ ಯಾದಗಿರಿ: ಶಾಂತಿ ಸದನ ಶಾಲೆಯಲ್ಲಿ ಸಂಭ್ರಮದ ಕೃಷ್ಣ ಜಯಂತಿ
ಕೃಷ್ಣ-ರಾಧೆ, ಗೋಪಿಕೆಯರ ವೇಷದಲ್ಲಿ ಕಂಗೊಳಿಸಿದ ಚಿಣ್ಣರು | ನೃತ್ಯ, ನಾಟಕದ ಮೂಲಕ ಧರ್ಮ–ಸಂಸ್ಕೃತಿಯ ಸಂದೇಶ

ಮಕ್ಕಳ ಮನದಲ್ಲಿ ಶ್ರೀಕೃಷ್ಣ: ಸಂಸ್ಕೃತಿ ಮತ್ತು ಸಂಸ್ಕಾರದ ನಲಿವು
ನಮ್ಮ ಸನಾತನ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಆಚರಣೆಗಳಲ್ಲ, ಅವು ಬದುಕಿಗೆ ಬೇಕಾದ ನೈತಿಕ ಮೌಲ್ಯಗಳನ್ನು ಕಲಿಸುವ ಜೀವಂತ ಪಾಠಶಾಲೆಗಳು. ಅದರಲ್ಲೂ ‘ಶ್ರೀಕೃಷ್ಣ ಜಯಂತಿ’ ಎಂದರೆ ಮಕ್ಕಳ ಪಾಲಿಗೆ ಉತ್ಸಾಹ, ಬಣ್ಣದ ಲೋಕ ಹಾಗೂ ಕಲ್ಪನೆಗಳ ಹಬ್ಬ. ಇತ್ತೀಚೆಗೆ ಶಾಲೆಯಲ್ಲಿ ಅತ್ಯಂತ ಸಡಗರದಿಂದ ಜರುಗಿದ ಕೃಷ್ಣ ಜಯಂತ್ಯೋತ್ಸವವು ಕೇವಲ ಒಂದು ಸಾಂಸ್ಕೃತಿಕ ಕಾರ್ಯಕ್ರಮವಾಗಿರದೆ, ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಹೊರಹಾಕುವ ಮತ್ತು ನಮ್ಮ ಪರಂಪರೆಯ ಬೇರುಗಳನ್ನು ಗಟ್ಟಿಗೊಳಿಸುವ ಅರ್ಥಪೂರ್ಣ ವೇದಿಕೆಯಾಯಿತು.
ಯಾದಗಿರಿ: ಮುದ್ದು ಕೃಷ್ಣನ ಮೋಹಕ ನಗೆ, ಬಾಲಲೀಲೆ, ತುಂಟಾಟ, ಕೃಷ್ಣ–ಸುಧಾಮರ ಸ್ನೇಹ ಸೇರಿದಂತೆ ಶ್ರೀಕೃಷ್ಣನ ಜೀವನದ ಹಲವು ಪ್ರಸಂಗಗಳನ್ನು ಮಕ್ಕಳು ತಮ್ಮ ಅಭಿನಯ ಹಾಗೂ ವೇಷಭೂಷಣದ ಮೂಲಕ ಮನೋಜ್ಞವಾಗಿ ಪ್ರದರ್ಶಿಸಿ, ನೆರೆದಿದ್ದವರ ಮನಸೂರೆಗೊಂಡರು.
ನಗರದ ಶಾಂತಿ ಸದನ ಶಾಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಜಾಗೃತಿ ಮೂಡಿಸುವ ಉದ್ದೇಶದಿಂದ ಶ್ರೀಕೃಷ್ಣ ಜಯಂತ್ಯೋತ್ಸವವನ್ನು ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಬಾಲಕೃಷ್ಣನ ಮೂರ್ತಿಗೆ ಪೂಜೆ ಸಲ್ಲಿಸಿ, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶಾಲೆಯ ಸಭಾಂಗಣವನ್ನು ಮಾವಿನ ತೋರಣ ಹಾಗೂ ವಿವಿಧ ಬಗೆಯ ಹೂವುಗಳಿಂದ ಆಕರ್ಷಕವಾಗಿ ಅಲಂಕರಿಸಲಾಗಿತ್ತು.
ಚಿಣ್ಣರ ಲೋಕದಲ್ಲಿ ಬಾಲಕೃಷ್ಣ: ಶಾಲೆಯ ಸಭಾಂಗಣದಲ್ಲಿ ಪುಟ್ಟ ಕೃಷ್ಣರು, ರಾಧೆಯರು ಹಾಗೂ ಗೋಪಿಕೆಯರ ವೇಷದಲ್ಲಿ ಮಕ್ಕಳು ಕಂಗೊಳಿಸಿದರು. ಬೆಣ್ಣೆ ಕದಿಯುವ ಕೃಷ್ಣ, ಕೊಳಲು ನುಡಿಸುವ ಗೋಪಾಲ ಹಾಗೂ ನವಿಲುಗರಿ ಧರಿಸಿದ ಬಾಲಕೃಷ್ಣನ ವಿವಿಧ ರೂಪಗಳು ನೋಡುಗರ ಗಮನ ಸೆಳೆದವು.
ಶ್ರೀಕೃಷ್ಣ ಸುಧಾಮರ ಗೆಳೆತನ :
ಶಾಲೆಯಲ್ಲಿ ಹಮ್ಮಿಕೊಂಡ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಸುಧಾಮರ ಗೆಳೆತನ ಕುರಿತು ಚಿಕ್ಕದಾದ ರೂಪಕ ಜರುಗಿತು. ಇದರಲ್ಲಿ ಶ್ರೀಕೃಷ್ಣ ಸುಧಾಮನ ಪಾದ ತೊಳೆದು ಪೂಜೆ ಮಾಡುವ ಸಂಸ್ಕೃತಿ, ಸಂಸ್ಕಾರ ಗೆಳೆತನಕ್ಕೆ ನೀಡುವ ಗೌರವ ಬಿಂಬಿಸಿತು.
ಮಕ್ಕಳ ಮುಗ್ಧ ನಗು, ಆಕರ್ಷಕ ವೇಷಭೂಷಣ ಹಾಗೂ ಅಭಿನಯವು ಪೋಷಕರು ಮತ್ತು ಶಿಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಕೃಷ್ಣನ ಬಾಲ್ಯದ ಲೀಲೆಗಳು, ಭಗವದ್ಗೀತೆಯ ಸಾರ ಹಾಗೂ ಧರ್ಮದ ಸಂದೇಶಗಳನ್ನು ಮಕ್ಕಳು ನೃತ್ಯ ಮತ್ತು ನಾಟಕಗಳ ಮೂಲಕ ಸುಂದರವಾಗಿ ಪ್ರದರ್ಶಿಸಿದರು.
ಮೌಲ್ಯಗಳ ಬಿತ್ತನೆ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಮೊಬೈಲ್ ಹಾಗೂ ಡಿಜಿಟಲ್ ಲೋಕಕ್ಕೆ ಹೆಚ್ಚು ಸೀಮಿತವಾಗುತ್ತಿರುವ ಸಂದರ್ಭದಲ್ಲಿ ಇಂತಹ ಸಾಂಸ್ಕೃತಿಕ ಆಚರಣೆಗಳು ಮಕ್ಕಳಲ್ಲಿ ನಮ್ಮ ಪರಂಪರೆ ಮತ್ತು ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.
ಶ್ರೀಕೃಷ್ಣನ ಜೀವನವು ಧರ್ಮದ ಮಾರ್ಗದಲ್ಲಿ ನಡೆಯುವುದು, ಕಷ್ಟಗಳನ್ನು ಧೈರ್ಯದಿಂದ ಎದುರಿಸುವುದು ಹಾಗೂ ಸಂಬಂಧಗಳನ್ನು ಪ್ರೀತಿ ಮತ್ತು ವಿಶ್ವಾಸದಿಂದ ಕಾಪಾಡಿಕೊಳ್ಳುವ ಸಂದೇಶವನ್ನು ನೀಡುತ್ತದೆ. ಶಾಲೆಯಲ್ಲಿ ನಡೆದ ಕೃಷ್ಣ ಜಯಂತಿ ಆಚರಣೆಯು ಕೇವಲ ಸಂಭ್ರಮಕ್ಕೆ ಸೀಮಿತವಾಗದೆ, ಮಕ್ಕಳಲ್ಲಿ ಸಂಸ್ಕೃತಿ, ಮೌಲ್ಯಗಳು, ಪರಸ್ಪರ ಪ್ರೀತಿ ಹಾಗೂ ದೇಶಪ್ರೇಮದ ಭಾವನೆ ಬೆಳೆಸುವ ಕಾರ್ಯಕ್ರಮವಾಗಿ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯದರ್ಶಿ ಬಸವಂತರಡ್ಡಿ ವೀರೆಡ್ಡಿ, ಪ್ರಾಂಶುಪಾಲೆ ಅನೀತಾ ಕಿಲ್ಲೇಕರ್, ಶಿಕ್ಷಕಿಯರಾದ ಸವಿತಾ ಶೆಟ್ಟಿ, ದೀಪಾಲಿ, ಮಧುಶ್ರೀ, ಜ್ಯೋತಿ, ಶಿವಕಾಂತಮ್ಮ ಸೇರಿದಂತೆ ಶಾಲೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
ಶ್ರೀಕೃಷ್ಣ ಬಾಲಲೀಲೆ : ವೇಷಭೂಷಣ ಮತ್ತು ಸಾಂಸ್ಕೃತಿಕ ನೃತ್ಯಗಳು:
ಈ ಉತ್ಸವದ ಪ್ರಮುಖ ಆಕರ್ಷಣೆ ಎಂದರೆ ಮಕ್ಕಳ ವೇಷಭೂಷಣ ಸ್ಪರ್ಧೆ. ಶಾಲೆಯ ಪುಟ್ಟ ಮಕ್ಕಳು ಶ್ರೀಕೃಷ್ಣ, ರಾಧೆ ಮತ್ತು ಗೋಪಿಕೆಯರ ವೇಷ ಧರಿಸಿ ನೋಡುಗರ ಕಣ್ಮನ ಸೆಳೆದರು. ಕೃಷ್ಣನ ಬಾಲ್ಯದ ಲೀಲೆಗಳನ್ನು ಬಿಂಬಿಸುವ ಭಕ್ತಿಗೀತೆಗಳು ಮತ್ತು ಜಾನಪದ ನೃತ್ಯರೂಪಕಗಳು ನೆರೆದಿದ್ದವರನ್ನು ಮಂತ್ರಮುಗ್ಧರನ್ನಾಗಿಸಿದವು.



