ಯಾದಗಿರಿ

ಮಾಸಾಬಿ ದರ್ಗಾ ಆಸ್ತಿ ಒತ್ತುವರಿ ತೆರವಿಗೆ ಆಗ್ರಹ

ಕೆಂಭಾವಿ: ಪಟ್ಟಣದ ಮಾಸಾಬಿ ದರ್ಗಾಕ್ಕೆ ಸೇರಿದ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನು ಒತ್ತುವರಿಯಾಗಿದ್ದು, ಕೂಡಲೇ ಜಂಟಿ ಸರ್ವೆ ನಡೆಸಿ ಹದ್ದುಬಸ್ತು ನಿಗದಿಪಡಿಸಿ ಒತ್ತುವರಿ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ (ರಿ) ವತಿಯಿಂದ ಯಾದಗಿರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ಸರ್ವೆ ನಂ. 3ರಲ್ಲಿ ಮಾಸಾಬಿ ದರ್ಗಾಕ್ಕೆ ಸೇರಿದ 7 ಎಕರೆ 14 ಗುಂಟೆ ಜಮೀನು ಇದೆ. ಪಹಣಿ ಕಾಲಂ 10ರಲ್ಲಿ ಈ ಜಮೀನನ್ನು ‘ಸರ್ಕಾರಿ’ ಎಂದು ನಮೂದಿಸಲಾಗಿದೆ. ಆದರೆ, ಕೆಲ ಖಾಸಗಿ ವ್ಯಕ್ತಿಗಳು ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಅಂಗಡಿ–ಮುಂಗಟ್ಟುಗಳನ್ನು ನಿರ್ಮಿಸಿ, ಅವುಗಳನ್ನು ಬಾಡಿಗೆಗೆ ನೀಡಿ ಆದಾಯ ಪಡೆಯುತ್ತಿದ್ದಾರೆ ಎಂದು ಸೇನೆಯ ಪದಾಧಿಕಾರಿಗಳು ಆರೋಪಿಸಿದರು.

ಒತ್ತುವರಿಯಿಂದ ದರ್ಗಾಕ್ಕೆ ಬರಬೇಕಾದ ಆದಾಯ ಇಲ್ಲದಂತಾಗಿದೆ. ಈ ಕುರಿತು ಪ್ರಶ್ನಿಸಲು ಮುಂದಾಗುವ ದರ್ಗಾ ಆಡಳಿತ ಮಂಡಳಿ ಹಾಗೂ ಸಾರ್ವಜನಿಕರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದು ಅವರು ದೂರಿದರು.

ಸುರಪುರ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಸಂಖ್ಯೆ 87/2007ರಡಿ ಆದೇಶ ಪಡೆದುಕೊಂಡಿರುವುದಾಗಿ ಹೇಳಿಕೊಂಡು ಬಾಡಿಗೆ ವಸೂಲಿ ಮಾಡಲಾಗುತ್ತಿದೆ. ದರ್ಗಾ ಆಸ್ತಿಯನ್ನು ರಕ್ಷಿಸಲು ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಜಮೀನಿನ ಜಂಟಿ ಸರ್ವೆ ನಡೆಸಿ, ಹದ್ದುಬಸ್ತು ಗುರುತಿಸಿ, ಅಕ್ರಮ ಒತ್ತುವರಿ ತೆರವುಗೊಳಿಸುವ ಜತೆಗೆ ದರ್ಗಾ ಆಸ್ತಿಯನ್ನು ಸಂರಕ್ಷಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ.

ಈ ಸಂದರ್ಭದಲ್ಲಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಕೆಂಭಾವಿ ಹೋಬಳಿ ಘಟಕದ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button