ಕಲಬುರಗಿಯನ್ನು ಬರಪೀಡಿತ ಜಿಲ್ಲೆಗಳ ಪಟ್ಟಿಗೆ ಸೇರಿಸಿ: ದೀಪಕ್ ಹೊನ್ನೂರಕರ್

ಚಿತ್ತಾಪುರ: ಮಳೆಯ ಕೊರತೆಯಿಂದ ಕಲಬುರಗಿ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದರೂ, ಜಿಲ್ಲೆಯನ್ನು ಬರಪೀಡಿತ ಜಿಲ್ಲೆಗಳ ಪಟ್ಟಿಯಿಂದ ಕೈಬಿಟ್ಟಿರುವುದು ಖಂಡನೀಯ ಎಂದು ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ದೀಪಕ್ ಹೊನ್ನೂರಕರ್ ಆರೋಪಿಸಿದ್ದಾರೆ.
ಈ ಕುರಿತು ಸೋಮವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಜಿಲ್ಲೆಯ ಜನರು ಆಡಳಿತಾರೂಢ ಕಾಂಗ್ರೆಸ್‌ಗೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಜಿಲ್ಲೆಯಲ್ಲಿ ಒಬ್ಬ ಲೋಕಸಭಾ ಸದಸ್ಯರು, ಒಂಬತ್ತು ಶಾಸಕರು ಹಾಗೂ ಮೂವರು ಸಚಿವರಿದ್ದಾರೆ. ಅವರಲ್ಲಿ ರಾಜ್ಯದ ಗೃಹ ಸಚಿವರೂ ಜಿಲ್ಲೆಯವರೇ ಆಗಿದ್ದಾರೆ. ಇಷ್ಟೊಂದು ರಾಜಕೀಯ ಪ್ರಾಬಲ್ಯವಿದ್ದರೂ ರೈತರ ಪರವಾಗಿ ಧ್ವನಿ ಎತ್ತಿ, ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಸರ್ಕಾರಕ್ಕೆ ಮನವರಿಕೆ ಮಾಡಿಕೊಡದಿರುವುದು ದುರದೃಷ್ಟಕರ’ ಎಂದು ಹೇಳಿದ್ದಾರೆ.
‘ಕಳೆದ ಎರಡು ತಿಂಗಳಿಂದ ಜಿಲ್ಲೆಯಲ್ಲಿ ಸಮರ್ಪಕ ಮಳೆಯಾಗಿಲ್ಲ. ತೊಗರಿ, ಹೆಸರು, ಉದ್ದು ಹಾಗೂ ಸೋಯಾ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಅಂತರ್ಜಲ ಮಟ್ಟವೂ ಕುಸಿದಿದ್ದು, ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಆತಂಕವಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸದಿರುವುದು ರೈತರಿಗೆ ಮಾಡಿರುವ ಅನ್ಯಾಯ’ ಎಂದು ದೂರಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಮಾತ್ರ ರೈತರ ಬಗ್ಗೆ ಮಾತನಾಡುವ ಜನಪ್ರತಿನಿಧಿಗಳು, ರೈತರು ಸಂಕಷ್ಟದಲ್ಲಿರುವಾಗ ಮೌನ ವಹಿಸಿರುವುದು ವಿಪರ್ಯಾಸ ಎಂದು ಅವರು ಟೀಕಿಸಿದ್ದಾರೆ.
ಬರಪೀಡಿತ ಜಿಲ್ಲೆಗಳ ಆಯ್ಕೆ ಕುರಿತು ರಾಜ್ಯ ಸರ್ಕಾರ ಮರುಪರಿಶೀಲನೆ ನಡೆಸಬೇಕು. ಕಲಬುರಗಿ ಜಿಲ್ಲೆಯನ್ನು ಕೂಡಲೇ ಬರಪೀಡಿತ ಪ್ರದೇಶವೆಂದು ಘೋಷಿಸಿ, ರೈತರಿಗೆ ಬೆಳೆಹಾನಿ ಪರಿಹಾರ, ಬೆಳೆ ವಿಮೆ ಹಾಗೂ ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಕಲ್ಪಿಸಬೇಕು. ಸರ್ಕಾರ ಸ್ಪಂದಿಸದಿದ್ದರೆ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಹೊನ್ನೂರಕರ್ ಎಚ್ಚರಿಸಿದ್ದಾರೆ.



