ಕಬ್ಬಿಗೆ ಟನ್‌ಗೆ ₹5 ಸಾವಿರ ನಿಗದಿ: ಸೆ.7ರಂದು ಅಫಜಲಪುರದಲ್ಲಿ ಕಬ್ಬು ಬೆಳೆಗಾರರ ಸಮ್ಮೇಳನ

ಅಫಜಲಪುರ: ಟನ್ ಕಬ್ಬಿಗೆ ₹5,000 ಬೆಲೆ ನಿಗದಿಪಡಿಸುವುದು, ಸ್ವಾಮಿನಾಥನ್ ಆಯೋಗದ ವರದಿ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸ್ವಾಭಿಮಾನಿ ಕಬ್ಬು ಬೆಳೆಗಾರರ ಐಕ್ಯ ಹೋರಾಟ ಸಮಿತಿ ಹಾಗೂ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಅಫಜಲಪುರ ತಾಲೂಕು ಘಟಕದ ವತಿಯಿಂದ ಸೆ.7ರಂದು ಪಟ್ಟಣದ ಶೆಟ್ಟಿ ಫಂಕ್ಷನ್ ಹಾಲ್‌ನಲ್ಲಿ ಕಬ್ಬು ಬೆಳೆಗಾರರ ಪ್ರಥಮ ಸಮ್ಮೇಳನ ಆಯೋಜಿಸಲಾಗಿದೆ.
ಈ ಕುರಿತು ಪಟ್ಟಣದಲ್ಲಿ ಶುಕ್ರವಾರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಶ್ರೀಮಂತ ಬಿರಾದಾರ ಹಾಗೂ ರಮೇಶ ಪಾಟೀಲ ಮಾತನಾಡಿ, ಕಬ್ಬು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಮ್ಮೇಳನದಲ್ಲಿ ಸಮಗ್ರ ಚರ್ಚೆ ನಡೆಸಿ, ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.
ರೈತ ಮುಖಂಡರಾದ ಗುರು ಚಾಂದಕವಟೆ ಹಾಗೂ ಭೀಮರಾಯ ಗೌರ ಮಾತನಾಡಿ, 8.5ರಷ್ಟು ಸಕ್ಕರೆ ಇಳುವರಿ ಆಧಾರದಲ್ಲಿ ಪ್ರತಿ ಟನ್ ಕಬ್ಬಿಗೆ ₹5,000 ಬೆಲೆ ನಿಗದಿಪಡಿಸಬೇಕು. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೊಳಿಸಬೇಕು. ಕಬ್ಬಿನ ಕಟಾವು ಹಾಗೂ ಸಾಗಾಣಿಕೆ ವೆಚ್ಚದ ಕುರಿತು ಕಾರ್ಖಾನೆ ಮತ್ತು ರೈತರ ನಡುವೆ ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳಲು ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದರು.
ಸಕ್ಕರೆ ಇಳುವರಿ ಘೋಷಣೆ ಹಾಗೂ ಕಬ್ಬಿನ ತೂಕದಲ್ಲಿ ನಡೆಯುತ್ತಿರುವ ಅಕ್ರಮ ತಡೆಗಟ್ಟಲು ರೈತರನ್ನು ಒಳಗೊಂಡ ತಾಂತ್ರಿಕ ಸಮಿತಿ ರಚಿಸಬೇಕು. ತಾಲೂಕಿನಲ್ಲಿ ಜಾರಿಗೊಳಿಸಲಾಗುತ್ತಿರುವ ಕೆರೆ ತುಂಬುವ ಯೋಜನೆಯನ್ನು ಮರುಪರಿಶೀಲಿಸಿ, ಕೆರೆಗಳ ಹೂಳೆತ್ತಿ ನೀರು ತುಂಬಿಸಬೇಕು. ಕಾಲುವೆಗಳಿಗೆ ಕಾಡಾ ಗೇಟ್‌ಗಳನ್ನು ಅಳವಡಿಸಿ ಕೊನೆಯ ಹಳ್ಳಿಗಳಿಗೂ ನೀರು ತಲುಪಿಸಬೇಕು. ಉಜನಿ ಜಲಾಶಯದಿಂದ ನೀರು ತರುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಸಮ್ಮೇಳನದಲ್ಲಿ ಹಕ್ಕೊತ್ತಾಯ ಮಾಡಲಾಗುವುದು ಎಂದರು.
ಮುಖಂಡ ನಾಮದೇವ ಕಡಕೋಳ ಮಾತನಾಡಿ, ಅಫಜಲಪುರ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಪಿಆರ್, ರೇಣುಕಾ ಹಾಗೂ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಗಳು ಸರ್ಕಾರದ ಆದೇಶದಂತೆ ಕಳೆದ ಸಾಲಿನ ಬಾಕಿ ಹಣವನ್ನು ಕೂಡಲೇ ರೈತರಿಗೆ ಪಾವತಿಸಬೇಕು ಎಂದು ಆಗ್ರಹಿಸಿದರು.
ಕಬ್ಬು ಸಾಗಣೆ ವಾಹನಗಳ ತೂಕವನ್ನು ಕಾರ್ಖಾನೆಯ ಮುಖ್ಯ ದ್ವಾರದಲ್ಲಿಯೇ ಮಾಡುವ ವ್ಯವಸ್ಥೆ ಕಲ್ಪಿಸಬೇಕು. ಒಂದು ಟನ್ ಕಬ್ಬು ಬೆಳೆಯಲು ರಸಗೊಬ್ಬರ, ಕ್ರಿಮಿನಾಶಕ, ಕೂಲಿ, ನೀರಾವರಿ, ಜಮೀನು ಬಾಡಿಗೆ, ಕಟಾವು ಹಾಗೂ ಸಾಗಾಣಿಕೆ ಸೇರಿದಂತೆ ₹3,500ಕ್ಕೂ ಹೆಚ್ಚು ವೆಚ್ಚವಾಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ನಿಗದಿಪಡಿಸುವ ಎಫ್‌ಆರ್‌ಪಿ (FRP) ದರ ರೈತರಿಗೆ ನ್ಯಾಯ ಒದಗಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುರುಗೇಂದ್ರ ಮಸಳಿ ಹಾಗೂ ಅಣ್ಣರಾಯಗೌಡ ಪಾಟೀಲ ಮಾತನಾಡಿದರು.



