ಬಲರಾಮ್ ಕುಟುಂಬಕ್ಕೆ ರಕ್ಷಣೆ, ನ್ಯಾಯ ಒದಗಿಸಲು ಆಗ್ರಹ
ಸೆ.2ರಂದು ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಕಲಬುರಗಿ, ಆ.31: ನಗರದ ಕರುಣೇಶ್ವರ ಬಡಾವಣೆಯ ನಿವಾಸಿ ಬಲರಾಮ್ ತಂದೆ ರಾಣಪ್ಪ ಹಾಗೂ ಅವರ ಕುಟುಂಬಕ್ಕೆ ಜೀವ ಭದ್ರತೆ ಒದಗಿಸಿ, ಕುಟುಂಬದವರು ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಸಾಮಾಜಿಕ ಹೋರಾಟಗಾರರು ಹಾಗೂ ನ್ಯಾಯವಾದಿಗಳು ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಹಾಗೂ ನ್ಯಾಯವಾದಿ ರವಿಚಂದ್ರ ಗುತ್ತೇದಾರ, ಬಲರಾಮ್ ಅವರ ಕುಟುಂಬಕ್ಕೆ ಬೆದರಿಕೆ, ಮಾನಸಿಕ ಕಿರುಕುಳ ನೀಡಲಾಗಿದೆ ಎಂಬ ಆರೋಪಗಳ ಕುರಿತು ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಲರಾಮ್ ಅವರು ಸಣ್ಣಪುಟ್ಟ ಖಾಸಗಿ ವ್ಯವಹಾರ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದು, ಸೇಡಂ ತಾಲ್ಲೂಕಿನ ಕಲಕಂಬಾ ಗ್ರಾಮದ ಶಶಿಕಾಂತ ಅಲಿಯಾಸ್ ಸ್ವಾಮಿ ಅವರೊಂದಿಗೆ ಹಣ ಹೂಡಿಕೆ ಸೇರಿದಂತೆ ವ್ಯವಹಾರ ನಡೆಸುತ್ತಿದ್ದರು. ವ್ಯವಹಾರದಲ್ಲಿ ನಷ್ಟ ಹಾಗೂ ಹಣಕಾಸಿನ ಸಮಸ್ಯೆಯಿಂದ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಬಲರಾಮ್ ಅವರು ಶಶಿಕಾಂತ ಅವರ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ಸುಮಾರು ₹54 ಲಕ್ಷ ವರ್ಗಾವಣೆ ಮಾಡಿದ್ದಾರೆ. ಇದಲ್ಲದೆ, ಮೌಖಿಕವಾಗಿ ಸಹ ಲಕ್ಷಾಂತರ ರೂಪಾಯಿ ನೀಡಿರುವುದಾಗಿ ಕುಟುಂಬದವರು ದೂರಿದ್ದಾರೆ ಎಂದು ಅವರು ಹೇಳಿದರು.
ಕಳೆದ ನಾಲ್ಕು ತಿಂಗಳಿಂದ ಶಶಿಕಾಂತ ಹಾಗೂ ಯಾದಗಿರಿ ಜಿಲ್ಲೆಯ ರವಿ ರಾಠೋಡ ಸೇರಿದಂತೆ ಕೆಲವರು ದೂರವಾಣಿ ಮೂಲಕ ಬೆದರಿಕೆ ಹಾಕುವುದು, ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸುವುದು ಹಾಗೂ ಹಣ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಆ.5ರಂದು ಚೌಕ್ ಪೊಲೀಸ್ ಠಾಣೆ ಸಮೀಪದ ಹೋಟೆಲ್‌ಗೆ ಬಲರಾಮ್ ಅವರನ್ನು ಕರೆಯಿಸಿಕೊಂಡು ಬೆದರಿಸಿ, ಅವರ ಐಸಿಐಸಿಐ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಸಹಿ ಮಾಡಿರುವ ನಾಲ್ಕು ಚೆಕ್‌ಗಳನ್ನು ಬಲವಂತವಾಗಿ ಪಡೆದುಕೊಳ್ಳಲಾಗಿದೆ ಎಂದು ಆರೋಪಿಸಿದರು. ಚೆಕ್‌ಗಳ ಸಂಖ್ಯೆ 000077, 000078, 000079 ಹಾಗೂ 000080 ಎಂದು ತಿಳಿಸಿದರು.
ಅಲ್ಲದೆ, ₹78 ಲಕ್ಷ ನೀಡದಿದ್ದರೆ ವಿವಿಧೆಡೆ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿ ಮಾನಹಾನಿ ಮಾಡಿ ಜೈಲಿಗೆ ಕಳುಹಿಸುವುದಾಗಿ ರವಿ ರಾಠೋಡ ಬೆದರಿಕೆ ಹಾಕಿದ್ದಾರೆ ಎಂದು ಬಲರಾಮ್ ಕುಟುಂಬದವರು ದೂರಿದ್ದಾರೆ. ಬಲರಾಮ್ ಅವರು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಅವರ ಪತ್ನಿ ಹಾಗೂ ಮಕ್ಕಳಿಗೂ ಬೆದರಿಕೆ ಹಾಕಲಾಗಿದೆ ಎಂಬ ಆರೋಪವಿದೆ ಎಂದು ಗುತ್ತೇದಾರ ತಿಳಿಸಿದರು.
‘ಆರೋಪಗಳ ಕುರಿತು ಸಮಗ್ರ ತನಿಖೆ ಅಗತ್ಯ’
ಬೆದರಿಕೆ ಹಾಗೂ ಮಾನಸಿಕ ಒತ್ತಡದ ಪರಿಸ್ಥಿತಿಯಲ್ಲಿ ಚೆಕ್‌ಗಳನ್ನು ಪಡೆಯಲಾಗಿದೆ ಎಂಬ ಆರೋಪವಿದ್ದು, ಅವುಗಳ ದುರುಪಯೋಗವಾಗದಂತೆ ಪೊಲೀಸರು ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಕುಟುಂಬದವರು ಜೀವಭಯದಲ್ಲಿರುವುದಾಗಿ ಹೇಳಿರುವುದರಿಂದ ತಕ್ಷಣ ಪೊಲೀಸ್ ರಕ್ಷಣೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಆರೋಪಗಳು ಸಾಬೀತಾದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಬೇಕು. ತನಿಖೆಯ ಮೇಲೆ ಯಾವುದೇ ಪ್ರಭಾವ, ಒತ್ತಡ ಅಥವಾ ಹಸ್ತಕ್ಷೇಪ ಇರದಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ಈ ಹಿನ್ನೆಲೆಯಲ್ಲಿ ಬಲರಾಮ್ ಕುಟುಂಬಕ್ಕೆ ನ್ಯಾಯ ಹಾಗೂ ರಕ್ಷಣೆ ನೀಡುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸೆಪ್ಟೆಂಬರ್ 2ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀಕಾಂತ ರೆಡ್ಡಿ, ಲಕ್ಷ್ಮಿಕಾಂತ ಸ್ವಾದಿ, ಬಸವರಾಜ್ ಟೀ ಬಾಡಿಯಾಳ, ವಿನೋದ ಸುಲ್ತಾನಪುರ, ನಾಗೇಂದ್ರಪ್ಪ, ರಾಜು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.



