ವಚನ ಸಾಹಿತ್ಯ ಜನಮಾನಸದಲ್ಲಿ ಬೇರೂರಿದ ಅನುಭವದ ಸತ್ಯ: ಸಿದ್ಧಲಿಂಗ ಮಹಾಸ್ವಾಮೀಜಿ

ಕಲಬುರಗಿ: ವಚನ ಸಾಹಿತ್ಯ ಕೇವಲ ಕಲ್ಪನೆಯ ಸಾಹಿತ್ಯವಲ್ಲ. ಶರಣರ ಬದುಕಿನ ಅನುಭವ, ಆತ್ಮವಿಮರ್ಶೆ ಹಾಗೂ ಸತ್ಯದ ಅನ್ವೇಷಣೆಯಿಂದ ಮೂಡಿಬಂದ ಸಾಹಿತ್ಯವಾಗಿದೆ. ವಚನಾಭಿಮಾನಿಗಳಾಗುವುದಕ್ಕಿಂತ ವಚನಾನುಯಾಯಿಗಳಾಗಿ ಬದುಕಿನಲ್ಲಿ ಅದರ ಆಶಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ನೆಲೋಗಿ ವಿರಕ್ತ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಹೇಳಿದರು.
ನಗರದ ಕನ್ನಡ ಭವನದ ಆವರಣದಲ್ಲಿ ಭಾನುವಾರ ನಡೆದ ಕಲಬುರಗಿ ವಿಭಾಗದ ಪ್ರಥಮ ವಚನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯುವಜನರಿಗೆ ವಚನ ಸಾಹಿತ್ಯದ ದರ್ಶನ ಮಾಡಿಸುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ಬಸವ ಸಾಹಿತ್ಯವನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿದ ಡಾ. ಎಂ.ಎಂ. ಕಲಬುರಗಿಯವರು ಬಸವತತ್ವಕ್ಕಾಗಿ ತಮ್ಮ ಬದುಕನ್ನೇ ಸಮರ್ಪಿಸಿಕೊಂಡಿದ್ದರು ಎಂದು ಸ್ಮರಿಸಿದರು.
ಸಮ್ಮೇಳನ ಉದ್ಘಾಟಿಸಿದ ಹಿರಿಯ ಲೇಖಕಿ ಡಾ. ಜಯದೇವಿ ಗಾಯಕ್ವಾಡ್ ಮಾತನಾಡಿ, ಜನಸಾಮಾನ್ಯರನ್ನು ನೇರವಾಗಿ ತಲುಪುವ ಶಕ್ತಿ ಬಸವಾದಿ ಶರಣರ ವಚನ ಸಾಹಿತ್ಯಕ್ಕಿದೆ. ಸಮಾಜ ಸುಧಾರಣೆಯ ಜತೆಗೆ ಸಮಸಮಾಜ ನಿರ್ಮಾಣಕ್ಕೆ ಶರಣರು ನೀಡಿದ ಕೊಡುಗೆ ಅಪಾರ. ಆರ್ಥಿಕ, ಸಾಮಾಜಿಕ ಹಾಗೂ ಧಾರ್ಮಿಕ ಸ್ವಾತಂತ್ರ್ಯದ ಆಶಯಗಳನ್ನು ಸಾರಿದ ಅನುಭವ ಮಂಟಪವು ವೈಚಾರಿಕ ಚಳವಳಿಯ ರೂಪವಾಗಿತ್ತು. ಕಾಯಕ ಮತ್ತು ದಾಸೋಹದ ಪರಿಕಲ್ಪನೆಯನ್ನು ಜಗತ್ತಿಗೆ ಪರಿಚಯಿಸಿದವರು ಶರಣರು ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ವಚನ ಸಾಹಿತ್ಯದ ಮೂಲಕ ಕನ್ನಡ ಭಾಷೆ ಶ್ರೀಮಂತಗೊಂಡಿದೆ. ವಚನ ಸಾಹಿತ್ಯ ವಿಶ್ವ ಸಾಹಿತ್ಯದ ಭಾಗವಾಗಿದ್ದು, ಕನ್ನಡ ಭಾಷೆಯ ಸೊಬಗನ್ನು ವಿಶ್ವದಾದ್ಯಂತ ವಿಸ್ತರಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಕನ್ನಡ ಭಾಷೆ ಪ್ರತಿಯೊಬ್ಬರ ಉಸಿರಾಗಬೇಕು ಎಂದರು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಮಲ್ಲಿಕಾರ್ಜುನ ವಡಗೇರಿಕೇರಿ ಮಾತನಾಡಿ, ವಚನಕಾರರು ಕೇವಲ ಬೋಧನೆ ಮಾಡಲಿಲ್ಲ; ತಮ್ಮ ನಡೆ-ನುಡಿಯ ಮೂಲಕ ಆದರ್ಶ ಬದುಕಿನ ಮಾದರಿ ತೋರಿಸಿದರು. ಕಾಯಕ–ದಾಸೋಹದ ತತ್ವವನ್ನು ವಿಶ್ವಕ್ಕೆ ಪರಿಚಯಿಸಿದ ಬಸವಣ್ಣ ಅವರು ಕರ್ನಾಟಕದ ಸಾಂಸ್ಕೃತಿಕ ನಾಯಕ ಮಾತ್ರವಲ್ಲ, ವಿಶ್ವನಾಯಕರಾಗಿದ್ದಾರೆ ಎಂದರು. ಜನಪರ ಚಿಂತನೆಯೊಂದಿಗೆ ಪರಿಷತ್ತನ್ನು ಇನ್ನಷ್ಟು ಬಲಪಡಿಸಲಾಗುವುದು ಎಂದು ಹೇಳಿದರು.
ವಚನ ಸಾಹಿತ್ಯ ಮತ್ತು ಸಂವಿಧಾನ
‘ವಚನ ಸಾಹಿತ್ಯ ಮತ್ತು ಸಂವಿಧಾನ’ ಕುರಿತು ಪತ್ರಕರ್ತ ಡಾ. ಶಿವರಂಜನ್ ಸತ್ಯಂಪೇಟೆ ಮಾತನಾಡಿ, ವಚನ ಸಾಹಿತ್ಯವು ಭಾರತೀಯ ಸಂವಿಧಾನದ ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಮಾನವ ಹಕ್ಕುಗಳ ಆಶಯಗಳನ್ನು ಪ್ರತಿಬಿಂಬಿಸುತ್ತದೆ. ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಲಾಗಿತ್ತು. ಹೀಗಾಗಿ ವಚನ ಸಾಹಿತ್ಯವನ್ನು ವಿಶ್ವದ ಶ್ರೇಷ್ಠ ಸಾಮಾಜಿಕ ಚಿಂತನೆಯ ಪರಂಪರೆಯಾಗಿ ನೋಡಬಹುದು. ಅಂದಿನ ಅನುಭವ ಮಂಟಪವೇ ಇಂದಿನ ಸಂಸತ್ತಿನ ಪರಿಕಲ್ಪನೆಗೆ ಹೋಲಿಕೆಯಾಗುತ್ತದೆ ಎಂದರು.
‘ವಚನ ಸಾಹಿತ್ಯ ಮತ್ತು ಮಹಿಳಾ ಸಂವೇದನೆ’ ಕುರಿತು ಡಾ. ವಿದ್ಯಾವತಿ ಬಲೂರ್ಗಿ ಮಾತನಾಡಿ, ಮೇಲೂ–ಕೀಳು, ಅಸಮಾನತೆ ಹಾಗೂ ಅನ್ಯಾಯದ ವಿರುದ್ಧ ಶರಣರು ತಮ್ಮ ವಚನಗಳ ಮೂಲಕ ಧ್ವನಿ ಎತ್ತಿದರು. ಮಹಿಳೆಯರನ್ನು ಅಬಲೆಯರೆಂದು ಕಾಣದೆ, ಆತ್ಮಗೌರವ ಮತ್ತು ನೈತಿಕ ಸ್ಥೈರ್ಯದಿಂದ ಬದುಕುವಂತೆ ಪ್ರೇರೇಪಿಸಿದರು. ಹೊನ್ನು, ಮಣ್ಣು, ಹೆಣ್ಣು ಮಾಯೆ ಎಂಬ ಅಲ್ಲಮಪ್ರಭುಗಳ ಚಿಂತನೆ ಹಾಗೂ ಲಿಂಗತಾರತಮ್ಯದ ವಿರುದ್ಧದ ಶರಣರ ವಿಚಾರಗಳನ್ನು ವಿವರಿಸಿದರು.
ಹೋರಾಟಗಾರ ಮರಿಯಪ್ಪ ಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಆರ್.ಜಿ. ಷಟಗಾರ, ಆನಂದ ಪಾಟೀಲ ಕೊರಳ್ಳಿ, ಬಸವರಾಜ ಸಾಗರ, ನೀಲಕಂಠ ಕಣ್ಣಿ, ಬಸವರಾಜ ಮೊರಬದ, ಸಿದ್ಧಲಿಂಗ ಬಾಳಿ ಮತ್ತಿತರರು ಉಪಸ್ಥಿತರಿದ್ದರು.
ಆಧುನಿಕ ವಚನ ವಾಚನ
‘ಯನಗೊಲಿದ ವಚನ’ ಆಧುನಿಕ ವಚನ ವಾಚನ ಗೋಷ್ಠಿಯಲ್ಲಿ ಹಲವು ಹಿರಿಯ ಕವಿಗಳು ತಮ್ಮ ಸ್ವರಚಿತ ವಚನಗಳನ್ನು ವಾಚಿಸಿ ಗಮನ ಸೆಳೆದರು. ಹಿರಿಯ ಲೇಖಕಿ ಡಾ. ಶೋಭಾದೇವಿ ಚೆಕ್ಕಿ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಕೋಣೆಕ, ಡಾ. ಎಸ್.ಎಸ್. ಪಾಟೀಲ ವೇದಿಕೆಯಲ್ಲಿದ್ದರು.
ಸಮಾರೋಪದಲ್ಲಿ ಹಿರಿಯ ಸಾಹಿತಿ ಡಾ. ಶ್ರೀಶೈಲ ನಾಗರಾಳ ಮಾತನಾಡಿ, ವಚನ ಚಳವಳಿಗೆ ದೇವರ ದಾಸಿಮಯ್ಯ ಪ್ರಮುಖ ಭೂಮಿಕೆ ವಹಿಸಿದ್ದರು. ಶರಣರ ವೈಚಾರಿಕತೆಯಿಂದ ಬದುಕು ಹಸನಾಗುತ್ತದೆ. ಬಡವರು ಹಾಗೂ ದಲಿತರ ಉದ್ಧಾರಕ್ಕಾಗಿ ಶರಣರು ನೀಡಿದ ಆಶಯಗಳ ಕಾರಣದಿಂದಲೇ ಇಂದಿಗೂ ಅವರನ್ನು ಸಮಾಜ ಸ್ಮರಿಸುತ್ತಿದೆ ಎಂದರು.
ಸಾರಂಗಮಠದ ಜಗದ್ಗುರು ಶ್ರೀ ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪದ್ಮಶ್ರೀ ಪುರಸ್ಕೃತ ಡಾ. ವಿಜಯಲಕ್ಷ್ಮಿ ದೇಶಮಾನೆ ಅವರನ್ನು ಸನ್ಮಾನಿಸಲಾಯಿತು. ಮಾಜಿ ಮೇಯರ್ ಶರಣಕುಮಾರ ಮೋದಿ, ಗುಲಬರ್ಗಾ ವಿಶ್ವವಿದ್ಯಾಲಯದ ನಿವೃತ್ತ ಗ್ರಂಥಪಾಲಕ ಡಾ. ಗಣಪತಿ ಸಿಂಧೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ವಚನ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆದ ಸಾಂಸ್ಕೃತಿಕ ಮೆರವಣಿಗೆಯಲ್ಲಿ ಭಾಗವಹಿಸಿದ್ದವರು ತಲೆಯ ಮೇಲೆ ವಚನ ಕಟ್ಟುಗಳನ್ನು ಹೊತ್ತು ಸಾಗಿದರು. ಕನ್ನಡ ಭವನದ ಆವರಣದಲ್ಲಿ ಬಸವ ಜಯಘೋಷಗಳು ಮೊಳಗಿದವು. ವಚನ ಸಂಗೀತ ಕಾರ್ಯಕ್ರಮವೂ ನಡೆಯಿತು.



