ಅಹಿಂದ್ ಸಂಘಟನೆ ರಾಜಕೀಯ ದಾಳವಾಗಲು ಬಿಡುವುದಿಲ್ಲ: ಶಾಂತಪ್ಪ ಕೂಡಿ

ಕಲಬುರಗಿ, ಸೆ. 8: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ್ ಸಂಘಟನೆಯನ್ನು ತಮ್ಮ ಸ್ವಾರ್ಥ ರಾಜಕಾರಣಕ್ಕೆ ಬಳಸಿಕೊಂಡಿದ್ದು, ಮತ್ತೊಮ್ಮೆ ಅಹಿಂದ್ ವರ್ಗವನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಕಲ್ಯಾಣ ಕರ್ನಾಟಕ ಹಿಂದುಳಿದ ವರ್ಗಗಳ ಒಕ್ಕೂಟದ ಮುಖಂಡ ಹಾಗೂ ವಿಪಕ್ಷದ ನಾಯಕ ಶಾಂತಪ್ಪ ಕೂಡಿ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2001ರಲ್ಲಿ ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಅಂದಿನ ಬೆಸ್ತ/ಕೋಲಿ ಸಮಾಜದ ರಾಜ್ಯಾಧ್ಯಕ್ಷರು ಹಾಗೂ ಸಿದ್ದರಾಮಯ್ಯ ಅವರ ಆಪ್ತ ಡಿ.ಜೆ. ಶ್ರೀನಿವಾಸ್ ಅವರು ‘ಅಹಿಂದ್’ ಹೆಸರಿನಲ್ಲಿ ಸಂಘಟನೆ ಹುಟ್ಟುಹಾಕಿದ್ದರು. ಆರಂಭದಲ್ಲಿ ಉತ್ತಮ ಉದ್ದೇಶದಿಂದ ರೂಪುಗೊಂಡಿದ್ದ ಸಂಘಟನೆ ನಂತರ ರಾಜಕೀಯ ಉದ್ದೇಶಗಳಿಗೆ ಬಳಕೆಯಾಗಿದೆ ಎಂದು ದೂರಿದರು.
ಜೆಡಿಎಸ್‌ನಿಂದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಸಿದ್ದರಾಮಯ್ಯ ಅವರನ್ನು ಪಕ್ಷದಿಂದ ಹೊರಹಾಕಿದ ಸಂದರ್ಭದಲ್ಲಿ, ಸಿದ್ದರಾಮಯ್ಯ ಅವರೊಂದಿಗೆ ಅಹಿಂದ್ ಸಂಘಟನೆಯನ್ನೂ ರಾಜಕೀಯವಾಗಿ ಬಳಸಿಕೊಳ್ಳುವ ಪ್ರಯತ್ನ ನಡೆಯಿತು. ಇದರಿಂದ ಸಂಘಟನೆಯ ಮೂಲ ಉದ್ದೇಶಕ್ಕೆ ಧಕ್ಕೆ ಉಂಟಾಯಿತು ಎಂದು ಅವರು ಹೇಳಿದರು.
ಮಾಜಿ ಸಚಿವರಾದ ಡಾ. ಎಚ್.ಸಿ. ಮಹಾದೇವಪ್ಪ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ, ಕೆ. ಮುಕುಡಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಖ್ಯ ಸಚೇತಕ ವಿಠಲ್ ಹೇರೂರು ಸೇರಿದಂತೆ ಹಲವು ಮುಖಂಡರು ಅಹಿಂದ್ ಸಂಘಟನೆ ಕಟ್ಟಲು ಶ್ರಮಿಸಿದ್ದರು. ಆದರೆ ನಂತರ ಕೆಲವರು ಸಂಘಟನೆಯನ್ನು ಸ್ವಾರ್ಥ ರಾಜಕಾರಣಕ್ಕೆ ಬಳಸಿಕೊಂಡ ಪರಿಣಾಮ ರಾಜ್ಯದ ಹಿಂದುಳಿದ ವರ್ಗಗಳ ರಾಜಕೀಯ ದಾರಿ ತಪ್ಪಿದೆ ಎಂದು ಶಾಂತಪ್ಪ ಕೂಡಿ ಆರೋಪಿಸಿದರು.
ಸಿದ್ದರಾಮಯ್ಯ ಅವರ ರಾಜಕೀಯ ಬಂಡವಾಳ ಈಗ ಬಹಿರಂಗವಾಗಿದೆ. ಅಹಿಂದ್ ಹೆಸರನ್ನು ಬಳಸಿಕೊಂಡು ರಾಜಕೀಯ ಲಾಭ ಪಡೆಯುವ ಪ್ರಯತ್ನ ಮುಂದುವರಿಯಲು ಬಿಡುವುದಿಲ್ಲ. ನಿಜವಾದ ಅಹಿಂದ್ ಒಕ್ಕೂಟ ಏನು ಎಂಬುದನ್ನು ಅಹಿಂದ್ ನಾಯಕರ ನೇತೃತ್ವದಲ್ಲಿ ಶೀಘ್ರದಲ್ಲೇ ರಾಜ್ಯಕ್ಕೆ ತೋರಿಸಲಾಗುವುದು ಎಂದು ಅವರು ಹೇಳಿದರು.
ತಮ್ಮ ಹಾಗೂ ತಮ್ಮ ಕುಟುಂಬದ ರಾಜಕೀಯ ಅಸ್ತಿತ್ವಕ್ಕಾಗಿ ಅಹಿಂದ್ ವರ್ಗವನ್ನು ಬಳಸಿಕೊಂಡು ಅಧಿಕಾರಕ್ಕೆ ಬಂದ ನಂತರ ಎಲ್ಲರನ್ನೂ ಟಿಶ್ಯೂ ಪೇಪರ್‌ನಂತೆ ಬಳಸಿಕೊಂಡು ಬಿಸಾಡುವ ರಾಜಕಾರಣವನ್ನು ಇನ್ನು ಮುಂದೆ ಸಹಿಸುವುದಿಲ್ಲ. ಶೀಘ್ರದಲ್ಲೇ ರಾಜ್ಯದಲ್ಲಿ ನಿಜವಾದ ಅಹಿಂದ್ ವರ್ಗದ ಸಭೆ ನಡೆಸಲಾಗುವುದು ಎಂದು ಶಾಂತಪ್ಪ ಕೂಡಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಸವರಾಜ ಬೂದಿಹಾಳ, ಲೋಹಿತ್ ವಿಶ್ವಕರ್ಮ, ಹನುಮಂತರಾವ್ ಹೂಗಾರ, ದಸ್ತಗೀರ್‌ಸಾಬ್ ನದಾಫ್, ಪಿಡ್ಡಪ್ಪ ಜಮಾದಾರ್, ಸಂತೋಷ ಕೋಲಿ, ಗೋಪಾಲ್ ಕದಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



