ಕಲಬುರಗಿಜಿಲ್ಲೆ ಸುದ್ದಿ

ಮಕ್ಕಳ ಕವಿ ಎ.ಕೆ. ರಾಮೇಶ್ವರ ಅವರಿಗೆ ಸೆ.27ರಂದು ಅಭಿನಂದನಾ ಸಮಾರಂಭ

ಎ.ಕೆ.ರಾಮೇಶ್ವರ ಸಾಹಿತ್ಯ-ಸಾಂಸ್ಕೃತಿಕ ಪ್ರತಿಷ್ಠಾನ ಉದ್ಘಾಟನೆ
ಮಕ್ಕಳ ಸಾಹಿತ್ಯಲೋಕದ ದಿಗ್ಗಜ, ಸುಮಾರು 50 ವರ್ಷಕ್ಕಿಂತ ಮೇಲ್ಪಟ್ಟು ಕಲಬುರಗಿ ನೆಲದಲ್ಲಿದ್ದುಕೊಂಡು, ಕನ್ನಡ ಸಾಹಿತ್ಯದಲ್ಲಿ ಮಕ್ಕಳ ಕವಿಯೆಂದೇ ಪ್ರಖ್ಯಾತಿ ಪಡೆದ ಎ.ಕೆ.ರಾಮೇಶ್ವರ ಅವರ ಹೆಸರಿನಲ್ಲಿ ಸಾಹಿತ್ಯ-ಸಾಂಸ್ಕೃತಿಕ ಪ್ರತಿಷ್ಠಾನವೊಂದು ನೋಂದಣಿಯಾಗಿದ್ದು, ಅದರ ಉದ್ಘಾಟನಾ ಸಮಾರಂಭವು ಸೆ.27 ರಂದು ಮಧ್ಯಾಹ್ನ 3.15 ಕ್ಕೆ ವಿಶ್ವೇಶ್ವರಯ್ಯ ಭವನದಲ್ಲಿ ನಡೆಯಲಿದೆ. ಹೊನ್ನಕಿರಣಗಿಯ ಶ್ರೀ ಚಂದ್ರಗುಂಡ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು. ಬೆಳಗಾವಿಯ ಹಿರಿಯ ಲೇಖಕರಾದ ಡಾ.ರಾಮಕೃಷ್ಣ ಮರಾಠೆ ಅವರು ಸಮಾರಂಭವನ್ನು ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡುವರು. ಪ್ರತಿಷ್ಠಾನದ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಅಧ್ಯಕ್ಷತೆ ವಹಿಸುವರು. ಎ.ಕೆ.ರಾಮೇಶ್ವರ ಅವರು ಬರೆದ ಮಕ್ಕಳ ಪದ್ಯಗಳ `ಗೀತ ಗಾಯನ’ ನಡೆಯಲಿದೆ.

ಕಲಬುರಗಿ, ಸೆ.14: ಕನ್ನಡ ಸಾಹಿತ್ಯಲೋಕದಲ್ಲಿ ‘ಮಕ್ಕಳ ಕವಿ’ ಎಂದೇ ಖ್ಯಾತರಾಗಿರುವ ಹಿರಿಯ ಸಾಹಿತಿ ಎ.ಕೆ. ರಾಮೇಶ್ವರ ಅವರಿಗೆ ಆತ್ಮೀಯ ಅಭಿನಂದನಾ ಸಮಾರಂಭ ಹಾಗೂ ಶ್ರೀ ಎ.ಕೆ. ರಾಮೇಶ್ವರ ಸಾಹಿತ್ಯ-ಸಾಂಸ್ಕೃತಿಕ ಪ್ರತಿಷ್ಠಾನದ ಉದ್ಘಾಟನಾ ಕಾರ್ಯಕ್ರಮವನ್ನು ಸೆ.27ರಂದು ನಗರದಲ್ಲಿ ಆಯೋಜಿಸಲಾಗಿದೆ.

ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಬೆಳಿಗ್ಗೆ 10.15ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಸೇಡಂನ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಪೂಜ್ಯ ಶ್ರೀ ಸದಾಶಿವ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಮಾಜಿ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ ಅವರು ಸಮಾರಂಭವನ್ನು ಉದ್ಘಾಟಿಸುವರು.

ವಿಕಾಸ ಅಕಾಡೆಮಿ ಕಲಬುರಗಿ ಸಂರಕ್ಷಕರು ಹಾಗೂ ರಾಜ್ಯಸಭೆಯ ಮಾಜಿ ಸದಸ್ಯ ಡಾ. ಬಸವರಾಜ ಪಾಟೀಲ ಸೇಡಂ ಅಧ್ಯಕ್ಷತೆ ವಹಿಸಿ, ‘ಕನ್ನಡದಲ್ಲಿ ಮಕ್ಕಳ ಸಾಹಿತ್ಯ’ ಗ್ರಂಥವನ್ನು ಲೋಕಾರ್ಪಣೆ ಮಾಡುವರು. ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ವಿಜಯಪುರದ ಮಕ್ಕಳ ಸಾಹಿತಿ ಫ.ಗು. ಸಿದ್ದಾಪುರ ಅವರು ಗ್ರಂಥದ ಕುರಿತು ಮಾತನಾಡುವರು. ಎ.ಕೆ. ರಾಮೇಶ್ವರ ಅವರನ್ನು ಅಭಿನಂದಿಸುವ ಹಿನ್ನೆಲೆಯಲ್ಲಿ ಸಾಹಿತಿ-ಪತ್ರಕರ್ತ ಮಹಿಪಾಲರೆಡ್ಡಿ ಸೇಡಂ ಅಭಿನಂದನಾ ನುಡಿಗಳನ್ನಾಡುವರು. ಬೆಂಗಳೂರಿನ ಪ್ರಕಾಶಕ ಸಿವಿಜಿ ಚಂದ್ರು ಉಪಸ್ಥಿತರಿರುವರು.

ಮಧ್ಯಾಹ್ನ 2.15ರಿಂದ ಸುಮಾರು 25 ಶಾಲಾ ಮಕ್ಕಳೊಂದಿಗೆ ಮಕ್ಕಳ ಕವಿ ಎ.ಕೆ. ರಾಮೇಶ್ವರ ಅವರು ಸಂವಾದ ನಡೆಸಲಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.

ಮಕ್ಕಳ ಸಾಹಿತ್ಯದ ಸಾಧಕರಿಗೆ ನಂದಿಕೋಲು’ ಪ್ರಶಸ್ತಿ ಇದೇ ಸಂದರ್ಭದಲ್ಲಿ ಮಕ್ಕಳ ಸಾಹಿತ್ಯಲೋಕದಲ್ಲಿ ಗಣನೀಯ ಸೇವೆ ಸಲ್ಲಿಸಿದ ಗುರುಶಾಂತಯ್ಯ ಭಂಟನೂರು ಅವರಿಗೆ ಎ.ಕೆ.ರಾಮೇಶ್ವರ ಮಕ್ಕಳ ಸಾಹಿತ್ಯ `ನಂದಿಕೋಲು’ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಗುವುದು. 5000 ರೂ.ಗಳ ನಗದು ಪುರಸ್ಕಾರ ಜತೆಗೆ ಸನ್ಮಾನ ಒಳಗೊಂಡಿರುತ್ತದೆ. ಇನ್ನೋರ್ವ ಹಿರಿಯ ಮಕ್ಕಳ ಕವಿ ಸಿಂದಗಿಯ ಹ.ಮ.ಪೂಜಾರ ಅವರಿಗೆ ಶ್ರೀ ಎ.ಕೆ.ರಾಮೇಶ್ವರ ಸಾಹಿತ್ಯ ಗೌರವ ಪುರಸ್ಕಾರ ನೀಡಿ ಗೌರವಿಸಲಾಗುವುದು. ಇತ್ತೀಚೆಗೆ ಪ್ರತಿಷ್ಠಾನದ ಪದಾಧಿಕಾರಿಗಳಾದ ಡಾ.ಶಿಲ್ಪಾ ಭಂಡಾರಿ, ಸಂಕೇತ್, ಬಿ.ಎಸ್.ದೇಸಾಯಿ, ಸಿದ್ದಪ್ಪ ತಳ್ಳಳ್ಳಿ, ಶಾಂತಾ ಪಸ್ತಾಪೂರ, ಡಾ. ಲಕ್ಷ್ಮೀ ಶಂಕರ ಜೋಶಿ,, ಡಾ.ಶೈಲಜಾ ಬಾಗೇವಾಡಿ, ಪರವಿನ್ ಸುಲ್ತಾನ, ಅಪ್ಪಾಸಾಹೇಬ ತೀರ್ಥೆ, ಕಿರಣ್ ಪಾಟೀಲ, ವೀರೇಶ ಕಂದಗಲ್, ಬಸವರಾಜ ಐನೋಳಿ, ರೇಣುಕಾ ಡಾಂಗೆ, ಚೈತನ್ಯ ಅವರು ಭಾಗವಹಿಸಿ ಪ್ರಶಸ್ತಿಗೆ ಇಬ್ಬರು ಸಾಹಿತಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button