ಕಲಬುರಗಿಜಿಲ್ಲೆ ಸುದ್ದಿ

ಬಸವಾಧಿ ಶರಣರ ಹೆಸರಿನಲ್ಲಿ ಹಿಂದೂ ಸಮಾವೇಶ: ಕಾಯಕರ ಶರಣರ ಸಮಾಜಗಳ ಒಕ್ಕೂಟ ವಿರೋಧ

ಕಲಬುರಗಿ, ಸೆ.23: ನಗರದ ಎನ್‌.ವಿ. ಮೈದಾನದಲ್ಲಿ ಸೆ.27ರಂದು ನಡೆಸಲು ಉದ್ದೇಶಿಸಿರುವ ಬಸವಾಧಿ ಶರಣರ ಹೆಸರಿನ ಹಿಂದೂ ಸಮಾವೇಶಕ್ಕೆ ಕರ್ನಾಟಕ ರಾಜ್ಯ ಕಾಯಕರ ಶರಣರ ಸಮಾಜಗಳ ಒಕ್ಕೂಟ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಈ ಕುರಿತು ನಗರದ ಜಗತ್ ಬಡಾವಣೆಯಲ್ಲಿರುವ ಶರಣ ದೊಹರ ಕಕ್ಕಯ್ಯ ದೇವಸ್ಥಾನದಲ್ಲಿ ಬುಧವಾರ ನಡೆದ ಸಭೆಯಲ್ಲಿ ವಿವಿಧ ಕಾಯಕರ ಶರಣ ಸಮಾಜಗಳ ಮುಖಂಡರು ಚರ್ಚೆ ನಡೆಸಿದರು.

‘ಬಸವತತ್ವದ ಮೇಲೆ ನಂಬಿಕೆ ಇಲ್ಲದವರು ಲಿಂಗ ದೀಕ್ಷೆ ಸ್ವೀಕರಿಸಿ, ಶರಣರ ಹೆಸರಿನಲ್ಲಿ ಹಿಂದೂ ಸಮಾವೇಶ ನಡೆಸುತ್ತಿರುವುದು ಸರಿಯಲ್ಲ’ ಎಂದು ಸಭೆಯಲ್ಲಿ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು.

12ನೇ ಶತಮಾನದಲ್ಲಿ ಬಸವಾಧಿ ಶರಣರು ಸಾರಿದ ಸಮಾನತೆ, ಕಾಯಕ ಮತ್ತು ದಾಸೋಹದ ತತ್ವಗಳ ಪರಂಪರೆಯಲ್ಲಿ 17ನೇ ಶತಮಾನದಲ್ಲಿ ಕನೇರಿಯ ಕಾಡಸಿದ್ದೇಶ್ವರರು ಪ್ರಮುಖರಾಗಿದ್ದಾರೆ. ಶರಣ ಪರಂಪರೆಯ ಮಠದಲ್ಲಿ ವೈದಿಕ ಆಚರಣೆಗಳನ್ನು ನಡೆಸುತ್ತಿರುವುದು ಆ ಪರಂಪರೆಯ ಆಶಯಗಳಿಗೆ ವಿರುದ್ಧವಾಗಿದೆ ಎಂದು ಮುಖಂಡರು ಅಭಿಪ್ರಾಯಪಟ್ಟರು.

ಈ ಹಿನ್ನೆಲೆಯಲ್ಲಿ ಸೆ.25ರಂದು ಬಸವತತ್ವ ಹಾಗೂ ಸಂವಿಧಾನ ರಕ್ಷಣಾ ಸಮಿತಿ ವತಿಯಿಂದ ಹಮ್ಮಿಕೊಂಡಿರುವ ಪ್ರತಿಭಟನಾ ಮೆರವಣಿಗೆಯಲ್ಲಿ ವಿವಿಧ ಕಾಯಕರ ಸಮಾಜಗಳ ಜನರು ಭಾಗವಹಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಒಕ್ಕೂಟದ ರಾಜ್ಯಾಧ್ಯಕ್ಷ ಭೀಮಣ್ಣ ಬೋನಾಳ, ದೊಹರ ಕಕ್ಕಯ್ಯ ಸಮಾಜದ ಸಾಯಿಬಣ್ಣ ಹೊಳ್ಕರ್, ಹೆಳವರ ಸಮಾಜದ ಮಲ್ಲಿಕಾರ್ಜುನ ಹೆಳವರ, ಹರಳಯ್ಯ ಸಮಾಜದ ಕಾಶಿರಾಯ ನಂದೂರ, ಶಿವಲಿಂಗಪ್ಪ ಗೌಳಿ, ಹಡಪದ ಅಪ್ಪಣ್ಣ ಸಮಾಜದ ವೀರಣ್ಣ ಸಣ್ಣೂರ, ಮಡಿವಾಳ ಸಮಾಜದ ಧರ್ಮಣ್ಣ ಮಡಿವಾಳ, ಜೇಡರ ದಾಸಿಮಯ್ಯ ಸಮಾಜದ ರೇವಣಸಿದ್ದಪ್ಪ ಗಡ್ಡದ, ಅಂಬಿಗರ ಚೌಡಯ್ಯ ಸಮಾಜದ ತಿಪ್ಪಣ್ಣಪ್ಪ ಕಮಕನೂರ, ಮೇದಾರ ಕೇತಯ್ಯ ಸಮಾಜದ ಭೀಮಣ್ಣ ಬೋನಾಳ, ಕುರುಬ ಸಮಾಜದ ಗೋಲ್ಳಾಳೇಶ್ವರ, ಹಿರಗಪ್ಪ, ಪೂಜಾರಿ ನೂಲಿಯ ಚಂದಯ್ಯ ಸಮಾಜದ ಬಿ.ಎಚ್. ಭಜಂತ್ರಿ, ರಮೇಶ ಹೊಸಮನಿ, ಸಿದ್ದರಾಮೇಶ್ವರ ಸಮಾಜದ ಭಾಷಾ ಘೋರಕನಾಥ್, ಚೌಗುಲೆ ಸೇರಿದಂತೆ ವಿವಿಧ ಸಮಾಜಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button