ಯಾದಗಿರಿ

ಸಿಂದಗಿ-ಕೊಡಂಗಲ್ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು ಒತ್ತಾಯ

ಕೆಂಭಾವಿ: ವಿಜಯಪುರ ಜಿಲ್ಲೆಯ ಸಿಂದಗಿಯಿಂದ ತೆಲಂಗಾಣದ ಕೊಡಂಗಲ್‌ವರೆಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ–16 ಅನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು ವಿಜಯಪುರ, ಕಲಬುರಗಿ ಹಾಗೂ ರಾಯಚೂರು–ಯಾದಗಿರಿ ಲೋಕಸಭಾ ಕ್ಷೇತ್ರಗಳ ಸಂಸದರು ಪಕ್ಷಭೇದ ಮರೆತು ಒಗ್ಗಟ್ಟಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಯಾದಗಿರಿ ಜಿಲ್ಲೆಯ ಮುಖಂಡರ ನಿಯೋಗ ಒತ್ತಾಯಿಸಿದೆ.

ಈ ಕುರಿತು ಯಾದಗಿರಿ ಜಿಲ್ಲೆಯ ಮುಖಂಡರಾದ ರಾಮನಗೌಡ ದೇಸಾಯಿ ಹಾಗೂ ಶರಣಬಸಪ್ಪ ಪಟ್ಟಣಶೆಟ್ಟಿ ಅವರ ನೇತೃತ್ವದ ನಿಯೋಗವು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿತು.

ವಿಜಯಪುರ, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಈ ರಸ್ತೆ ಹಲವು ಕಡೆಗಳಲ್ಲಿ ತೀವ್ರವಾಗಿ ಹದಗೆಟ್ಟಿದ್ದು, ನಿತ್ಯ ಸಂಚರಿಸುವ ವಾಹನ ಸವಾರರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಿ ಸಮಗ್ರ ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ನಿಯೋಗ ತಿಳಿಸಿದೆ.

ಈ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವ ಸಂಬಂಧ ರಾಜ್ಯ ಸರ್ಕಾರವು 2023ರಲ್ಲೇ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ (MoRTH) ಪ್ರಸ್ತಾವನೆ ಸಲ್ಲಿಸಿದೆ. ಆದರೆ, ಇದುವರೆಗೆ ಅಂತಿಮ ಮಂಜೂರಾತಿ ದೊರೆತಿಲ್ಲ. ಪ್ರಸ್ತಾವನೆಯು ಕಡತದ ಹಂತದಲ್ಲೇ ಬಾಕಿ ಉಳಿದಿರುವುದು ಬೇಸರದ ಸಂಗತಿ ಎಂದು ರಾಮನಗೌಡ ದೇಸಾಯಿ ತಿಳಿಸಿದರು.

ಮೂರು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿ

ಪ್ರಸ್ತಾವಿತ ರಸ್ತೆ ಮೂರು ಪ್ರಮುಖ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಹಾದುಹೋಗಲಿದೆ. ವಿಜಯಪುರ ಲೋಕಸಭಾ ಕ್ಷೇತ್ರದ ಸಿಂದಗಿಯಿಂದ ಡಂಬಳದವರೆಗೆ ಸುಮಾರು 22 ಕಿ.ಮೀ., ಕಲಬುರಗಿ ಕ್ಷೇತ್ರದ ಡಂಬಳದಿಂದ ನಾಗರಹಳ್ಳಿವರೆಗೆ ಸುಮಾರು 17 ಕಿ.ಮೀ. ಹಾಗೂ ರಾಯಚೂರು–ಯಾದಗಿರಿ ಕ್ಷೇತ್ರದ ನಾಗರಹಳ್ಳಿಯಿಂದ ಅರಕೇರಿವರೆಗೆ ಮತ್ತು ಯಾದಗಿರಿ ಜಿಲ್ಲೆಯ ಪ್ರಮುಖ ಭಾಗವನ್ನು ಒಳಗೊಂಡಿದೆ.

ಹೀಗಾಗಿ ಮೂರು ಕ್ಷೇತ್ರಗಳ ಸಂಸದರು ಒಟ್ಟಾಗಿ ಕೇಂದ್ರ ಸರ್ಕಾರದ ಗಮನ ಸೆಳೆದು, ಬಾಕಿ ಇರುವ ಪ್ರಸ್ತಾವನೆಗೆ ಶೀಘ್ರ ಅಂತಿಮ ಅನುಮೋದನೆ ಕೊಡಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ನಿಯೋಗ ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button