ಕಲಬುರಗಿಜಿಲ್ಲೆ ಸುದ್ದಿ

ದಾನದಲ್ಲಿ ಶ್ರೇಷ್ಠವಾದ ನೇತ್ರದಾನ; ವಿದ್ಯಾರ್ಥಿಗಳಿಗೆ ಡಾ. ಕವಿತಾ ಪಾಟೀಲ ಕರೆ

ಕಲಬುರಗಿ: ಮರಣದ ನಂತರ ನೇತ್ರದಾನ ಮಾಡುವ ಮೂಲಕ ಅಂಧತ್ವ ನಿವಾರಣೆಗೆ ನೆರವಾಗುವುದರ ಜತೆಗೆ, ದೃಷ್ಟಿಹೀನರ ಬದುಕಿನಲ್ಲಿ ಬೆಳಕು ಮೂಡಿಸಬಹುದು ಎಂದು ಜಿಮ್ಸ್‌ನ ನೇತ್ರ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ. ಕವಿತಾ ಪಾಟೀಲ ಹೇಳಿದರು.

ನಗರದ ಜಿಮ್ಸ್‌ ಒಪಿಡಿ ವಿಭಾಗದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮ ಹಾಗೂ ಜಿಮ್ಸ್ ಜಿಲ್ಲಾ ಆಸ್ಪತ್ರೆಯ ನೇತ್ರ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ 41ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಕಾರ್ಯಕ್ರಮಕ್ಕೆ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

‘ಸಮಾಜಕ್ಕೆ ಏನಾದರೂ ಒಳಿತು ಮಾಡಬೇಕು ಎಂಬ ಆಶಯವಿದ್ದರೆ ನೇತ್ರದಾನಕ್ಕಿಂತ ಶ್ರೇಷ್ಠವಾದ ದಾನ ಮತ್ತೊಂದಿಲ್ಲ. ಹುಟ್ಟಿನಿಂದಲೇ ದೃಷ್ಟಿ ಕಳೆದುಕೊಂಡವರ ಬದುಕಿನಲ್ಲಿ ಬೆಳಕು ಮೂಡಿಸಲು ಮರಣಾನಂತರ ನೇತ್ರದಾನ ಮಾಡುವುದು ಅತ್ಯಂತ ಸಾರ್ಥಕ ಕಾರ್ಯ. ಇದರಿಂದ ಸಾವು ಶಾಶ್ವತ ಬದುಕಿಗೆ ದಾರಿಯಾಗುತ್ತದೆ’ ಎಂದು ಅವರು ಹೇಳಿದರು.

ಮೆಡಿಕಲ್‌ ಕಾಲೇಜಿನ ವಿದ್ಯಾರ್ಥಿಗಳು ನೇತ್ರದಾನದ ಮಹತ್ವ ಅರಿತು, ಈ ಮಹತ್ಕಾರ್ಯಕ್ಕೆ ಮುಂದಾಗಬೇಕು ಎಂದು ಡಾ. ಕವಿತಾ ಪಾಟೀಲ ಕರೆ ನೀಡಿದರು.

ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಹಾಗೂ ಜಿಲ್ಲಾ ಅಂಧತ್ವ ಕಾರ್ಯಕ್ರಮಾಧಿಕಾರಿ ಡಾ. ರವಿಕಾಂತಿ ಕ್ಯಾತನಾಳ ಮಾತನಾಡಿ, ಮಾನವನ ಕಣ್ಣು ದೇಹದ ಅತ್ಯಂತ ಪ್ರಮುಖ ಹಾಗೂ ಸಂಕೀರ್ಣ ಇಂದ್ರಿಯ ಅಂಗವಾಗಿದ್ದು, ಬೆಳಕನ್ನು ಗ್ರಹಿಸಿ ಸುತ್ತಲಿನ ಪ್ರಪಂಚವನ್ನು ಅರಿಯಲು ನೆರವಾಗುತ್ತದೆ. ಹೀಗಾಗಿ ನೇತ್ರದಾನದ ಕುರಿತು ಪ್ರತಿಯೊಬ್ಬರೂ ಅರಿವು ಮೂಡಿಸಿಕೊಳ್ಳಬೇಕು ಎಂದರು.

ನೇತ್ರದಾನದ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ‘ದೃಷ್ಟಿಗಾಗಿ’ ರೋಲ್‌ಪ್ಲೇ, ಜನಜಾಗೃತಿ ಫಲಕಗಳ ಪ್ರದರ್ಶನ ಹಾಗೂ ನೇತ್ರದಾನ ಪ್ರತಿಜ್ಞಾ ವಿಧಿ ನಡೆಯಿತು.

ಕಾರ್ಯಕ್ರಮದಲ್ಲಿ ಒಪಿಡಿ ಸರ್ಜನ್‌ ಡಾ. ಶಾಲಿನಿ ಸಜ್ಜನ್‌ ಶೆಟ್ಟಿ, ನೇತ್ರ ವಿಭಾಗದ ವೈದ್ಯರಾದ ಡಾ. ರಾಜೇಶ್ವರಿ ಮಹಾಂತಗೋಳ, ಡಾ. ಶೃತಿ ಬಾಡದ್, ಡಾ. ಜಬೇರ್, ಡಾ. ರಾಜಾಕ್, ಮೊಬೈಲ್‌ ಯೂನಿಟ್‌ ನೇತ್ರ ವೈದ್ಯೆ ಡಾ. ಶ್ರೀದೇವಿ, ನೇತ್ರಾಧಿಕಾರಿಗಳಾದ ವೀರಣ್ಣ ಎಸ್. ಕುಂಬಾರ, ಬಾಲಭೀಮ್ ಶಿರಸಗಿ, ಜಿಲ್ಲಾ ಸೈಕಾಲಜಿಸ್ಟ್‌ ಕೌನ್ಸಿಲರ್‌ ಮಂಜುನಾಥ ಕಂಬಾಳಿಮಠ, ಜಿಮ್ಸ್‌ ಮೆಡಿಕಲ್‌ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

janabhipraya

https://janabhipraya.com

Related Articles

Leave a Reply

Your email address will not be published. Required fields are marked *

Back to top button