ಕೆಂಭಾವಿ ಪೊಲೀಸ್ ಠಾಣೆಯನ್ನು ಶಹಾಪುರ ವೃತ್ತಕ್ಕೆ ಸೇರ್ಪಡೆಗೊಳಿಸುವ ನಿರ್ಧಾರ ಸ್ವಾಗತಾರ್ಹ: ಕೆಆರ್ಡಿಎಸ್ಎಸ್ (ನಾಗವಾರ ಬಣ)

ಕೆಂಭಾವಿ, ಆ. 2: ಕೆಂಭಾವಿ ಪಟ್ಟಣದ ಪೊಲೀಸ್ ಠಾಣೆಯನ್ನು ಹುಣಸಗಿ ಪೊಲೀಸ್ ವೃತ್ತದಿಂದ ಶಹಾಪುರ ಪೊಲೀಸ್ ವೃತ್ತ ಕಚೇರಿಗೆ ಸೇರ್ಪಡೆಗೊಳಿಸಿರುವ ಸರ್ಕಾರದ ನಿರ್ಧಾರವನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ.) ಯಾದಗಿರಿ ಜಿಲ್ಲಾ ಸಮಿತಿ ಸ್ವಾಗತಿಸಿದೆ.
ಈ ಕುರಿತು ಗೃಹ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿರುವ ಸಮಿತಿ, ಕೆಂಭಾವಿ ಪೊಲೀಸ್ ಠಾಣೆ ವ್ಯಾಪ್ತಿಯ ಸುಮಾರು 80 ಗ್ರಾಮಗಳು ಶಹಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿರುವುದರಿಂದ ಶಹಾಪುರ ಪೊಲೀಸ್ ವೃತ್ತಕ್ಕೆ ಸೇರ್ಪಡೆಗೊಳಿಸಿರುವ ಕ್ರಮವು ಸಾರ್ವಜನಿಕ ಹಿತದೃಷ್ಟಿಯಿಂದ ಸೂಕ್ತವಾಗಿದೆ ಎಂದು ತಿಳಿಸಿದೆ.
ಪ್ರಸ್ತುತ ಕೆಂಭಾವಿ ಠಾಣೆ ಹುಣಸಗಿ ಪೊಲೀಸ್ ವೃತ್ತಕ್ಕೆ ಒಳಪಟ್ಟಿರುವ ಕಾರಣ ಸಾರ್ವಜನಿಕರಿಗೆ ಪೊಲೀಸ್ ಸೇವೆ ಪಡೆಯಲು ಅನಗತ್ಯ ತೊಂದರೆಗಳು ಎದುರಾಗುತ್ತಿದ್ದವು. ಅಲ್ಲದೆ, ಹುಣಸಗಿ ವೃತ್ತದ ವ್ಯಾಪ್ತಿಯಲ್ಲಿ ಹೆಚ್ಚಿನ ಪೊಲೀಸ್ ಠಾಣೆಗಳಿರುವುದರಿಂದ ಆಡಳಿತಾತ್ಮಕ ಒತ್ತಡವೂ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಕೆಂಭಾವಿ ಠಾಣೆಯನ್ನು ಶಹಾಪುರ ಪೊಲೀಸ್ ವೃತ್ತಕ್ಕೆ ವರ್ಗಾಯಿಸಿರುವುದು ಗ್ರಾಮೀಣ ಭಾಗದ ಜನರಿಗೆ ತ್ವರಿತ ಹಾಗೂ ಪರಿಣಾಮಕಾರಿ ಪೊಲೀಸ್ ಸೇವೆ ದೊರಕಲು ನೆರವಾಗಲಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ಸರ್ಕಾರ ಹೊರಡಿಸಿರುವ ಆದೇಶವನ್ನು ಯಾವುದೇ ಕಾರಣಕ್ಕೂ ಹಿಂದಕ್ಕೆ ಪಡೆಯದೆ ಮುಂದುವರಿಸಬೇಕು. ಸಾರ್ವಜನಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ಯಥಾಸ್ಥಿತಿಯಲ್ಲಿ ಜಾರಿಗೊಳಿಸುವಂತೆ ಸಮಿತಿ ಮನವಿ ಮಾಡಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ಶಿವಶರಣ ನಾಗರೆಡ್ಡಿ ಹಾಗೂ ಬಸವರಾಜ್ ಕಟ್ಟಿಮನಿ, ಬ್ಲಾಕ್ ಕಾಂಗ್ರೆಸ್ ಹೋಬಳಿ ಘಟಕದ ಪರಿಶಿಷ್ಟ ಜಾತಿ ಕಾರ್ಯಾಧ್ಯಕ್ಷ ಮರೇಪ್ಪ ಎಸ್. ಗೌಂಡಿ, ತಾಲ್ಲೂಕು ಸಂಚಾಲಕ ಶರಣಪ್ಪ ಭೂತಾಳಿ, ತಾಲೂಕು ಸಂಘಟನಾ ಸಂಚಾಲಕ ಶಿವಪ್ಪ ಜಿ. ಕಂಬಾರ್, ಹೋಬಳಿ ಸಂಚಾಲಕ ಮಂಜುನಾಥ್ ಕೊಂಬಿನ್, ಹನುಮಂತ್ ಬೊಮ್ಮನಹಳ್ಳಿ, ಮಾನಪ್ಪ ಮಾವಿನ್ಮಟ್ಟಿ, ಅಂಬರೀಷ್ ಬೊಮ್ಮನಹಳ್ಳಿ, ಖಂಡಪ್ಪ ಯಾಳಗಿ, ಸಿದ್ದಾರ್ಥ್ ಮಳಾಹಳ್ಳಿಕರ್, ವಿಜಯಕುಮಾರ್ ಕಟ್ಟಿಮನಿ, ಸೂಗಪ್ಪ ನಗನೂರು, ಸಿದ್ದಪ್ಪ ದೊಡ್ಮನಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.



