ಶ್ರೀನಿವಾಸ ಸರಡಗಿ ರೈತರಿಗೆ ಬೆಳೆವಿಮೆ ಪರಿಹಾರ ಬಿಡುಗಡೆಗೆ ಆಗ್ರಹ

ಕಲಬುರಗಿ, ಆ. 2: 2025–26ನೇ ಸಾಲಿನ ಬೆಳೆವಿಮೆ ಪರಿಹಾರವನ್ನು ಶ್ರೀನಿವಾಸ ಸರಡಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರ್ಹ ರೈತರ ಖಾತೆಗಳಿಗೆ ತಕ್ಷಣ ಜಮಾ ಮಾಡಬೇಕು ಎಂದು ಆಗ್ರಹಿಸಿ ಗ್ರಾಮದ ರೈತರು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ, ಬೆಳೆವಿಮೆ ಅಂತರ್ಜಾಲ ತಾಣದಲ್ಲಿ ಶ್ರೀನಿವಾಸ ಸರಡಗಿ ಗ್ರಾಮಕ್ಕೆ ಕೊರತೆ ಪ್ರಮಾಣ (ಶಾರ್ಟ್ಫಾಲ್): 1.031481 ಎಂದು ದಾಖಲಾಗಿದ್ದು, ತಾಂತ್ರಿಕ ದೋಷದಿಂದ ಗ್ರಾಮದ ರೈತರಿಗೆ ಎರಡನೇ ಕಂತಿನ ಬೆಳೆವಿಮೆ ಪರಿಹಾರ ಇನ್ನೂ ಜಮೆಯಾಗಿಲ್ಲ ಎಂದು ಆರೋಪಿಸಿದ್ದಾರೆ. ಸುತ್ತಮುತ್ತಲಿನ ಗ್ರಾಮ ಪಂಚಾಯಿತಿಗಳ ರೈತರಿಗೆ ಪರಿಹಾರ ಬಿಡುಗಡೆಯಾಗಿದ್ದರೂ, ಶ್ರೀನಿವಾಸ ಸರಡಗಿ ಗ್ರಾಮದ ರೈತರು ಮಾತ್ರ ವಂಚಿತರಾಗಿದ್ದಾರೆ ಎಂದು ದೂರಿದ್ದಾರೆ.
ಕಳೆದ ವರ್ಷ ಸುರಿದ ಅತಿವೃಷ್ಟಿಯಿಂದ ಗ್ರಾಮದಲ್ಲಿ ಸುಮಾರು ಶೇ. 90ರಷ್ಟು ಬೆಳೆಹಾನಿಯಾಗಿತ್ತು. ಬಳಿಕ ಮಳೆ ಕೊರತೆಯಿಂದ ಮರುಬಿತ್ತನೆ ನಡೆಸಲು ಸಾಧ್ಯವಾಗದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿತ್ತನೆಗೆ ಅಗತ್ಯವಾದ ಬೀಜ, ಗೊಬ್ಬರ ಹಾಗೂ ಇತರೆ ಕೃಷಿ ಚಟುವಟಿಕೆಗಳಿಗೆ ಬೇಕಾದ ಹಣಕ್ಕಾಗಿ ರೈತರು ಬೆಳೆವಿಮೆ ಪರಿಹಾರವನ್ನೇ ಅವಲಂಬಿಸಿದ್ದರೂ, ಪರಿಹಾರ ಬಿಡುಗಡೆಯಲ್ಲಿ ಉಂಟಾಗಿರುವ ವಿಳಂಬದಿಂದ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಆದ್ದರಿಂದ, ಬೆಳೆವಿಮೆ ಅಂತರ್ಜಾಲ ತಾಣದಲ್ಲಿರುವ ಕೊರತೆ ಪ್ರಮಾಣ ಹಾಗೂ ಸ್ಥಿತಿಗತಿ ಸಂಬಂಧಿತ ತಾಂತ್ರಿಕ ದೋಷವನ್ನು ತಕ್ಷಣ ಪರಿಶೀಲಿಸಿ, ಶ್ರೀನಿವಾಸ ಸರಡಗಿ ಗ್ರಾಮದ ಎಲ್ಲ ಅರ್ಹ ರೈತರಿಗೆ 2025–26ನೇ ಸಾಲಿನ ಬೆಳೆವಿಮೆ ಪರಿಹಾರವನ್ನು ಶೀಘ್ರವಾಗಿ ಜಮಾ ಮಾಡಬೇಕು ಎಂದು ರೈತರು ಸರ್ಕಾರ ಹಾಗೂ ಕೃಷಿ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಸಂಗಯ್ಯಸ್ವಾಮಿ ಹಿರೇಮಠ, ಸಂತೋಷ ಆಡೆ, ಆಕಾಶ್ ರಾಥೋಡ್, ಲಿಂಗರಾಜ ಮಾಲಿ ಪಾಟೀಲ್, ದತ್ತು ಜಾದವ್, ಈರಣ್ಣಗೌಡ ನಾಗಶೆಟ್ಟಿ, ಪ್ರವೀಣ ತಂಗಾ, ನಾಗಪ್ಪಗೌಡ, ಸಂತೋಷ ಗಂಗಾಣಿ, ಬಸವರಾಜ ಅತಿಥಿ, ಸಿದ್ದಣ್ಣ ಅತಿಥಿ, ಶರಣು ಶ್ರೀಮನಿ, ಶಿವರಾಜ್ ಮಾಲಿ ಪಾಟೀಲ್, ಈರಣ್ಣ ವಾಡಿ, ಸುಭಾಷ್ ಗಂಗಾಣಿ, ಶಿವರಾಜ್ ಗೋನಾಯಕ್, ದಯಾನಂದ ಗಂಗಾಣಿ, ಧೂಳಯ್ಯಸ್ವಾಮಿ ಹೊಸಮನಿ, ಸಂಜುಕುಮಾರ್, ಶರಣಗೌಡ ಬಿರಾದಾರ್, ಸೋಮಶೇಖರ ಹಡಪದ್, ಮಲ್ಲಯ್ಯಸ್ವಾಮಿ ಸೇರಿದಂತೆ ಹಲವಾರು ರೈತರು ಉಪಸ್ಥಿತರಿದ್ದರು.



