ಕೆಂಭಾವಿ ಅಂಚೆ ಕಚೇರಿಯಲ್ಲಿ ಸಿಬ್ಬಂದಿ ಕೊರತೆ: ಸಾರ್ವಜನಿಕರಿಗೆ ತೀವ್ರ ತೊಂದರೆ

ಸಮಯಕ್ಕೆ ಸರಿಯಾಗಿ ಪ್ರಮುಖ ದಾಖಲೆಗಳು ಹಾಗೂ ಪಿಂಚಣಿ ಪತ್ರಗಳು ತಲುಪದೆ ತೊಂದರೆಯಾಗುತ್ತಿದೆ. ಸರ್ಕಾರ ಹಾಗೂ ಅಂಚೆ ಇಲಾಖೆಯ ಉನ್ನತಾಧಿಕಾರಿಗಳು ಕೂಡಲೇ ಗಮನಹರಿಸಿ ಕೆಂಭಾವಿ ಅಂಚೆ ಕಚೇರಿಗೆ ಖಾಲಿ ಇರುವ ಪೋಸ್ಟ್ ಮಾಸ್ಟರ್ ಹುದ್ದೆ ಭರ್ತಿ ಮಾಡಬೇಕು ಮತ್ತು ಹೆಚ್ಚುವರಿ ಡೆಲಿವರಿ ಸಿಬ್ಬಂದಿಯನ್ನು ನೇಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂಬುದು ಸ್ಥಳೀಯ ಹಾಗೂ ಗ್ರಾಹಕರ ಆಗ್ರಹವಾಗಿದೆ.
ಕೆಂಭಾವಿ: ಪಟ್ಟಣದ ಮುಖ್ಯ ಅಂಚೆ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ತೀವ್ರಗೊಂಡಿದ್ದು, ದೈನಂದಿನ ಅಂಚೆ ಸೇವೆಗಳು ಅಸ್ತವ್ಯಸ್ತಗೊಂಡಿವೆ. ಅಗತ್ಯ ಸಿಬ್ಬಂದಿ ಇಲ್ಲದ ಕಾರಣ ಪಟ್ಟಣದ ನಿವಾಸಿಗಳಷ್ಟೇ ಅಲ್ಲದೆ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರೂ ಅಂಚೆ ಸೇವೆ ಪಡೆಯಲು ಪರದಾಡುವಂತಾಗಿದೆ.
ಪ್ರಸ್ತುತ ಇಡೀ ಪಟ್ಟಣಕ್ಕೆ ಒಬ್ಬರೇ ಅಂಚೆ ವಿತರಕರು ಕಾರ್ಯನಿರ್ವಹಿಸುತ್ತಿದ್ದು, ಮನೆ ಮನೆಗೆ ಪತ್ರಗಳು, ಸ್ಪೀಡ್ ಪೋಸ್ಟ್, ಬ್ಯಾಂಕ್ ಕಾರ್ಡ್ಗಳು, ಸರ್ಕಾರಿ ದಾಖಲೆಗಳು ಹಾಗೂ ಇತರೆ ಪ್ರಮುಖ ಅಂಚೆಗಳನ್ನು ಸಮಯಕ್ಕೆ ತಲುಪಿಸುವುದು ಕಷ್ಟಕರವಾಗಿದೆ. ಒಬ್ಬ ಸಿಬ್ಬಂದಿಯ ಮೇಲೆಯೇ ಸಂಪೂರ್ಣ ವಿತರಣೆಯ ಹೊಣೆಗಾರಿಕೆ ಇರುವುದರಿಂದ ನೂರಾರು ಅಂಚೆಗಳು ದಿನಗಟ್ಟಲೆ ಕಚೇರಿಯಲ್ಲೇ ಬಾಕಿ ಉಳಿಯುತ್ತಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಅಂಚೆ ವಿತರಣೆಯಲ್ಲಿ ಆಗುತ್ತಿರುವ ವಿಳಂಬದಿಂದ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು, ವ್ಯಾಪಾರಿಗಳು ಹಾಗೂ ವಿವಿಧ ಸರ್ಕಾರಿ ಯೋಜನೆಗಳ ಫಲಾನುಭವಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಆದ್ದರಿಂದ ತಕ್ಷಣವೇ ಮತ್ತೊಬ್ಬ ಅಂಚೆ ವಿತರಕರನ್ನು ನೇಮಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಪೋಸ್ಟ್ ಮಾಸ್ಟರ್ ಹುದ್ದೆಯೂ ಖಾಲಿ
ಕಚೇರಿಯ ಪೋಸ್ಟ್ ಮಾಸ್ಟರ್ ಹುದ್ದೆ ಕಳೆದ ಹಲವು ವರ್ಷಗಳಿಂದ ಖಾಲಿ ಬಿದ್ದಿದ್ದು, ಪ್ರಸ್ತುತ ಸಹಾಯಕ ಪೋಸ್ಟಲ್ ಅಸಿಸ್ಟೆಂಟ್ ಅವರೇ ಹೆಚ್ಚುವರಿ ಹೊಣೆಗಾರಿಕೆಯಲ್ಲಿ ಪೋಸ್ಟ್ ಮಾಸ್ಟರ್ ಕರ್ತವ್ಯವನ್ನೂ ನಿರ್ವಹಿಸುತ್ತಿದ್ದಾರೆ. ಇದರಿಂದ ಉಳಿತಾಯ ಖಾತೆ ವ್ಯವಹಾರಗಳು, ಕೌಂಟರ್ ಸೇವೆಗಳು ಹಾಗೂ ಆಡಳಿತಾತ್ಮಕ ಕಾರ್ಯಗಳು ವಿಳಂಬವಾಗುತ್ತಿದ್ದು, ಕಚೇರಿಯ ಕಾರ್ಯನಿರ್ವಹಣೆ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ.
ಕೆಂಭಾವಿ ಮುಖ್ಯ ಅಂಚೆ ಕಚೇರಿಯ ವ್ಯಾಪ್ತಿಯಲ್ಲಿ ಪಟ್ಟಣದ ಜೊತೆಗೆ ಸುತ್ತಮುತ್ತಲಿನ 16 ಗ್ರಾಮಗಳ ಗ್ರಾಮೀಣ ಅಂಚೆ ಸೇವೆ (ಜಿಡಿಎಸ್) ಸೇರಿರುವುದರಿಂದ ಪ್ರತಿದಿನ ಹೆಚ್ಚಿನ ಪ್ರಮಾಣದ ಅಂಚೆ ವ್ಯವಹಾರ ನಡೆಯುತ್ತದೆ. ಆದರೆ ಅಗತ್ಯ ಸಿಬ್ಬಂದಿ ಇಲ್ಲದ ಕಾರಣ ಸೇವೆಯ ಗುಣಮಟ್ಟ ಕುಸಿದಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿಬ್ಬಂದಿ ಕೊರತೆಯನ್ನು ಕೂಡಲೇ ನಿವಾರಿಸಿ, ಖಾಲಿ ಇರುವ ಪೋಸ್ಟ್ ಮಾಸ್ಟರ್ ಹಾಗೂ ಅಂಚೆ ವಿತರಕರ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಸಾರ್ವಜನಿಕರಿಗೆ ಸುಗಮ ಅಂಚೆ ಸೇವೆ ಒದಗಿಸಬೇಕು ಎಂದು ನಾಗರಿಕರು ಅಂಚೆ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.



