ಜಿಲ್ಲಾಸುದ್ದಿಗಳು

‘ಮಹಿಳಾ ಸಬಲೀಕರಣ ಮಾತಲ್ಲೇ; ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಶೂನ್ಯ ಸ್ಥಾನ’

ಕಲಬುರಗಿ: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಒಬ್ಬರೂ ಮಹಿಳಾ ಶಾಸಕರಿಗೆ ಸಚಿವ ಸ್ಥಾನ ನೀಡದಿರುವುದು ಕಾಂಗ್ರೆಸ್ ಸರ್ಕಾರದ ಮಹಿಳಾ ವಿರೋಧಿ ಧೋರಣೆಯನ್ನು ಬಯಲಿಗೆಳೆದಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಶೋಭಾ ಶಂಕರ ಬಾಣಿ ಆರೋಪಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಚುನಾವಣೆ ವೇಳೆ ಮಹಿಳಾ ಸಬಲೀಕರಣ, ಸಮಾನ ಅವಕಾಶ ಹಾಗೂ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ದೊಡ್ಡ ದೊಡ್ಡ ಭರವಸೆಗಳನ್ನು ನೀಡಿದ್ದ ಸರ್ಕಾರ, ಅಧಿಕಾರ ಹಂಚಿಕೆಯ ಸಂದರ್ಭದಲ್ಲಿ ಮಹಿಳೆಯರನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಟೀಕಿಸಿದ್ದಾರೆ.

‘ಗೃಹಲಕ್ಷ್ಮೀ, ಗೃಹಜ್ಯೋತಿ, ನಾರಿಶಕ್ತಿ ಎಂಬ ಘೋಷಣೆಗಳು ಕೇವಲ ಪ್ರಚಾರಕ್ಕೆ ಸೀಮಿತವಾಗಿದ್ದು, ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನ ನೀಡದಿರುವುದು ಸರ್ಕಾರದ ನಿಜವಾದ ಮನೋಭಾವವನ್ನು ಅನಾವರಣಗೊಳಿಸಿದೆ’ ಎಂದು ಅವರು ಹೇಳಿದ್ದಾರೆ.

ರಾಜ್ಯದ ಜನತೆ ಸಮರ್ಥ ಮಹಿಳಾ ಶಾಸಕರನ್ನು ವಿಧಾನಸಭೆಗೆ ಆಯ್ಕೆ ಮಾಡಿ ಕಳುಹಿಸಿದ್ದರೂ, ಅವರಿಗೆ ಸಚಿವ ಸಂಪುಟದಲ್ಲಿ ಅವಕಾಶ ನಿರಾಕರಿಸಿರುವುದು ಮಹಿಳೆಯರ ರಾಜಕೀಯ ನಾಯಕತ್ವದ ಮೇಲಿನ ಅವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಆರೋಪಿಸಿದ್ದಾರೆ.

ಹಿಂದುಳಿದ ವರ್ಗದ ಶಾಸಕ ಮಂಕಾಳ ವೈದ್ಯ ಹಾಗೂ ಮಹಿಳಾ ನಾಯಕಿ ಗಾಯತ್ರಿ ಶಾಂತೇಗೌಡ ಅವರಿಗೆ ಸಚಿವ ಸ್ಥಾನ ದೊರೆಯದಿರುವುದು ಪ್ರಾತಿನಿಧ್ಯದ ಪ್ರಶ್ನೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ ಎಂದು ಅವರು ತಿಳಿಸಿದ್ದಾರೆ.

ಸರ್ಕಾರ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ನೈತಿಕ ಹಕ್ಕನ್ನೇ ಕಳೆದುಕೊಂಡಿದ್ದು, ಮಹಿಳೆಯರಿಗೆ ಸಮಾನ ಅವಕಾಶ ನೀಡದೆ ಕೇವಲ ಘೋಷಣೆಗಳ ಮೂಲಕ ರಾಜಕೀಯ ನಡೆಸುತ್ತಿದೆ ಎಂಬ ಭಾವನೆ ರಾಜ್ಯದ ಮಹಿಳೆಯರಲ್ಲಿ ಮೂಡಿದೆ ಎಂದು ಶೋಭಾ ಶಂಕರ ಬಾಣಿ ಹೇಳಿದ್ದಾರೆ.

ಇನ್ನಾದರೂ ಮುಖ್ಯಮಂತ್ರಿ ಸಚಿವ ಸಂಪುಟವನ್ನು ಮರುಪರಿಶೀಲಿಸಿ, ಅರ್ಹ ಮಹಿಳಾ ಶಾಸಕರಿಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕು. ಇಲ್ಲವಾದರೆ ಮಹಿಳೆಯರ ಪರ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದ್ದು, ರಾಜ್ಯದ ಮಹಿಳೆಯರು ಸರ್ಕಾರಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಅವರು ಎಚ್ಚರಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button