ಜಿಲ್ಲಾಸುದ್ದಿಗಳು

28 ವರ್ಷಗಳ ಸೇವೆ ಸಾರ್ಥಕ: ನಿವೃತ್ತ ಮುಖ್ಯ ಶಿಕ್ಷಕ ಶ್ರೀಶೈಲ ಹದಗಲ್‌ಗೆ ಭಾವಪೂರ್ಣ ಬೀಳ್ಕೊಡುಗೆ

ಕೆಂಭಾವಿ, ಆ. 4:ಸಮೀಪದ ರಾಂಪುರ ಸರ್ಕಾರಿ ಶಾಲೆಯಲ್ಲಿ ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀಶೈಲ ಬಿ. ಹದಗಲ್ ಅವರ ವಯೋನಿವೃತ್ತಿ ಅಭಿನಂದನಾ ಸಮಾರಂಭವನ್ನು ಗುರುವಾರ ಭಾವಪೂರ್ಣವಾಗಿ ನಡೆಸಲಾಯಿತು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶ್ರೀಶೈಲ ಹದಗಲ್, ತಮ್ಮ 28 ವರ್ಷಗಳ ಶಿಕ್ಷಕ ಸೇವೆಯು ತಮಗೆ ಅಪಾರ ತೃಪ್ತಿ ನೀಡಿದೆ ಎಂದು ಹೇಳಿದರು. ಶಿಕ್ಷಕ ವೃತ್ತಿ ಅತ್ಯಂತ ಪೂಜ್ಯನೀಯವಾಗಿದ್ದು, ದೇಶ ನಿರ್ಮಾಣದ ಕಾರ್ಯದಲ್ಲಿ ಶಿಕ್ಷಕರು ತಮ್ಮನ್ನು ತೊಡಗಿಸಿಕೊಂಡಾಗ ಮಾತ್ರ ವೃತ್ತಿ ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ತಮ್ಮ ಯಶಸ್ವಿ ಸೇವಾ ಅವಧಿಯಲ್ಲಿ ಸಹಕಾರ ನೀಡಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸಹೋದ್ಯೋಗಿ ಶಿಕ್ಷಕರು, ಪಾಲಕರು ಹಾಗೂ ಪೋಷಕರನ್ನು ಅವರು ಕೃತಜ್ಞತೆಯಿಂದ ಸ್ಮರಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಖ್ಯಾತ ಸಾಹಿತಿ ಹಾಗೂ ಸಂಶೋಧಕ ನಿಂಗನಗೌಡ ದೇಸಾಯಿ ಪರಸನಹಳ್ಳಿ ಮಾತನಾಡಿ, ಶ್ರೀಶೈಲ ಹದಗಲ್ ಅವರು ಪಾಠ ಬೋಧನೆಗೆ ಮಾತ್ರ ಸೀಮಿತರಾಗದೆ, ವಿದ್ಯಾರ್ಥಿಗಳಲ್ಲಿ ಮೌಲ್ಯಾಧಾರಿತ ಶಿಕ್ಷಣ ಹಾಗೂ ಉತ್ತಮ ಸಂಸ್ಕಾರ ಬೆಳೆಸುವಲ್ಲಿ ವಿಶೇಷ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು. ಸಾಹಿತ್ಯ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿಯೂ ಅವರು ಸಲ್ಲಿಸಿದ ಸೇವೆ ಶ್ಲಾಘನೀಯವಾಗಿದ್ದು, ಅವರ ನಿವೃತ್ತ ಜೀವನ ಸುಖ-ಶಾಂತಿಯಿಂದ ಕೂಡಿರಲಿ ಎಂದು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುದನೂರ ಸಮೂಹ ಸಂಪನ್ಮೂಲ ವ್ಯಕ್ತಿ ಕಾಂತೇಶ ಹಲಗಿನಮನಿ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಆಡಳಿತಾತ್ಮಕವಾಗಿ ಎದುರಾಗುವ ಸವಾಲುಗಳು ಹಾಗೂ ಅವುಗಳ ಪರಿಹಾರದ ಕುರಿತು ಮಾಹಿತಿ ನೀಡಿದರು. ವರ್ಗಾವಣೆ ಮತ್ತು ನಿವೃತ್ತಿ ಶಿಕ್ಷಕರ ಜೀವನದ ಸಹಜ ಪ್ರಕ್ರಿಯೆಯಾಗಿದ್ದು, ಶ್ರೀಶೈಲ ಹದಗಲ್ ಅವರ ಸೇವೆ ಶಿಕ್ಷಕ ಸಮುದಾಯಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಮುದನೂರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಂ.ಬಿ. ಪಾಟೀಲ, ಶಿವಾನಂದಯ್ಯ ಹಿರೇಮಠ, ಗುರುಸ್ವಾಮಿ, ಶ್ರೀಶೈಲ ಪಾಸೋಡಿ, ವಿಶ್ವನಾಥ ಹರಸೂರ, ಹೊನ್ನಪ್ಪಗೌಡ ಪಾಟೀಲ, ರಾಜಶೇಖರ ಪಾಟೀಲ, ಚನ್ನಪ್ಪ ಬಾಗಲಕೋಟ ಸೇರಿದಂತೆ ಹಲವು ಶಿಕ್ಷಕರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ವಿವಿಧ ಶಾಲೆಗಳ ಶಿಕ್ಷಕರು, ಗ್ರಾಮದ ಮುಖಂಡರು, ಪಾಲಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದ ಸ್ವಾಗತವನ್ನು ರಾಮರೆಡ್ಡಿ ನೆರವೇರಿಸಿದ್ದು, ಅಶೋಕ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button