ಸಾವಿರಾರು ಜೈನ ಭಕ್ತರ ಸಮ್ಮುಖದಲ್ಲಿ ಧಾರ್ಮಿಕ ಮಹೋತ್ಸವ
ಭಕ್ತಿ-ವೈಭವದಲ್ಲಿ ಚಾತುರ್ಮಾಸ್ಯ ಮಂಗಲ ಕಲಶ ಸ್ಥಾಪನೆ

ಕಲಬುರಗಿ: ನಗರದ ಗಾಜಿಪುರದಲ್ಲಿರುವ 1008 ಆದಿನಾಥ ದಿಗಂಬರ ಜೈನ ಮಂದಿರದಲ್ಲಿ ಭಾನುವಾರ 108 ಪರಮಪೂಜ್ಯ ಆಚಾರ್ಯ ಆರ್ಷಕೀರ್ತಿ ಮಹಾರಾಜರ ಪಾವನ ಸಾನ್ನಿಧ್ಯ ಹಾಗೂ ಕ್ಷುಲ್ಲಕ ಶ್ರೀ 105 ಸುಪ್ರಭಸಾಗರ ಮಹಾರಾಜರ ಉಪಸ್ಥಿತಿಯಲ್ಲಿ ಚಾತುರ್ಮಾಸ್ಯ ಮಂಗಲ ಕಲಶ ಸ್ಥಾಪನೆ ಕಾರ್ಯಕ್ರಮ ಭಕ್ತಿ, ಶ್ರದ್ಧೆ ಮತ್ತು ವೈಭವದಿಂದ ನೆರವೇರಿತು.
ಚಾತುರ್ಮಾಸ್ಯ ಅಂಗವಾಗಿ ಬೆಳಗ್ಗೆಯಿಂದ ರಾತ್ರಿ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜೈನ ಶ್ರಾವಕರು ಮತ್ತು ಶ್ರಾವಕಿಯರ ಸಕ್ರಿಯ ಭಾಗವಹಿಸುವಿಕೆಯಲ್ಲಿ ಜರುಗಿದವು. ಜೈನ ದಿಗಂಬರ ಭಗವಂತನ ಸ್ಮರಣೆ ಹಾಗೂ ಜಯಘೋಷಗಳ ನಡುವೆ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಧಾರ್ಮಿಕ ಉತ್ಸಾಹ ಮೆರೆದರು.
1008 ಆದಿನಾಥ ದಿಗಂಬರ ಜೈನ ಮಂದಿರದಿಂದ ಕೊಠಾರಿ ಭವನದವರೆಗೆ ಆಚಾರ್ಯ ಆರ್ಷಕೀರ್ತಿ ಮಹಾರಾಜರ ನೇತೃತ್ವದಲ್ಲಿ ಭವ್ಯ ಚಾತುರ್ಮಾಸ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಭಕ್ತರು ಭಜನೆ, ಧರ್ಮಘೋಷ ಹಾಗೂ ಜಯಘೋಷಗಳೊಂದಿಗೆ ಹೆಜ್ಜೆ ಹಾಕಿ ಭಕ್ತಿಭಾವ ವ್ಯಕ್ತಪಡಿಸಿದರು.
ಬಳಿಕ ಮಹಾಭಿಷೇಕ, ಕಲ್ಯಾಣ ಮಂದಿರ ವಿಧಾನ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. ಮಧ್ಯಾಹ್ನ ವರ್ಷಾಯೋಗ ಚಾತುರ್ಮಾಸ್ಯ ಮಂಗಲ ಕಲಶ ಸ್ಥಾಪನೆಯ ನಂತರ ಪರಮಪೂಜ್ಯ ಆಚಾರ್ಯರು ಶ್ರಾವಕ–ಶ್ರಾವಕಿಯರಿಗೆ ಧರ್ಮೋಪದೇಶ, ಹಿತವಚನ ಹಾಗೂ ಮಂಗಳ ಪ್ರವಚನ ನೀಡಿ ಧರ್ಮಾಚರಣೆಯ ಮಹತ್ವವನ್ನು ವಿವರಿಸಿದರು.
ಸಂಜೆ ಮಂಗಲ ಕಲಶ ವೀರಕರ ಭವ್ಯ ಮೆರವಣಿಗೆ 15 ಅಲಂಕೃತ ಬಗ್ಗಿಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಆದಿನಾಥ ದಿಗಂಬರ ಜೈನ ಮಂದಿರಕ್ಕೆ ಆಗಮಿಸಿತು. ನಂತರ ಆಚಾರ್ಯ ಆರ್ಷಕೀರ್ತಿ ಮಹಾರಾಜರ ದಿವ್ಯ ಸಾನ್ನಿಧ್ಯದಲ್ಲಿ ಚಾತುರ್ಮಾಸ್ಯ ಮಂಗಲ ಕಲಶವನ್ನು ವಿಧಿವತ್ತಾಗಿ ಪ್ರತಿಷ್ಠಾಪಿಸಲಾಯಿತು.
ಧಾರ್ಮಿಕ ಮಹೋತ್ಸವದಲ್ಲಿ ತ್ಯಾಗಿ ಸಮಿತಿಯ ಪದಾಧಿಕಾರಿಗಳು, ನಗರದ ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಜೈನ ಭಕ್ತರು ಭಾಗವಹಿಸಿ ಪೂಜೆ, ಪ್ರವಚನ ಮತ್ತು ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡು ಆಶೀರ್ವಾದ ಪಡೆದರು.



