ಕಠಿಣ ಪರಿಶ್ರಮ, ಶಿಸ್ತಿನಿಂದ ಯಶಸ್ಸು ಸಾಧ್ಯ: ದೇವಣ್ಣಗೌಡ ಪಾಟೀಲ
ಜಿಲಾನಾಬಾದ್ ಸರ್ಕಾರಿ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸ್ವಾಗತ, ನಿವೃತ್ತ ಉಪನ್ಯಾಸಕರಿಗೆ ಗೌರವಪೂರ್ವಕ ಬೀಳ್ಕೊಡುಗೆ

ಕಲಬುರಗಿ, ಆ. 5: ನಗರದ ಜಿಲಾನಾಬಾದ್ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ನಿವೃತ್ತ ಉಪನ್ಯಾಸಕರಿಗೆ ಬೀಳ್ಕೊಡುಗೆ ಸಮಾರಂಭವನ್ನು ಮಂಗಳವಾರ ವಿಜೃಂಭಣೆಯಿಂದ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ದೇವಣ್ಣಗೌಡ ಪಾಟೀಲ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಕಠಿಣ ಪರಿಶ್ರಮ, ಶಿಸ್ತು ಹಾಗೂ ನಿರಂತರ ಅಭ್ಯಾಸದಿಂದ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಮತ್ತು ಪರಿಶ್ರಮದ ಮೂಲಕ ಲಭ್ಯವಿರುವ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉನ್ನತ ಗುರಿ ಸಾಧಿಸಬೇಕು ಎಂದು ಹೇಳಿದರು.
“ವಿದ್ಯಾರ್ಥಿಗಳೇ ದೇಶದ ನಿಜವಾದ ಸಂಪತ್ತು. ಗುಣಮಟ್ಟದ ಶಿಕ್ಷಣದ ಮೂಲಕ ದೇಶದ ಭವಿಷ್ಯವನ್ನು ರೂಪಿಸುವ ಶಕ್ತಿ ಅವರಲ್ಲಿದೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಶಿಕ್ಷಣವನ್ನು ಜೀವನದ ಪ್ರಮುಖ ಆದ್ಯತೆಯನ್ನಾಗಿ ಪರಿಗಣಿಸಬೇಕು” ಎಂದು ಅವರು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯ ದಶರಥ ರಾಠೋಡ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ನಿವೃತ್ತ ಉಪನ್ಯಾಸಕರಾದ ಮಹೇಶ ದೇಶಪಾಂಡೆ ದಂಪತಿ ಹಾಗೂ ರಾಜಶೇಖರ ಮಿಣಜಿಗಿ ದಂಪತಿ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಿ, ಅವರ ಶೈಕ್ಷಣಿಕ ಸೇವೆಯನ್ನು ಸ್ಮರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಶೇಖ್ ಸಮೀನ್, ನರಸಪ್ಪ ರಂಗೋಲಿ, ಶಿವಾನಂದ ಬಿರಾದಾರ, ಖಾದರ್ ಬೇಗ್, ಧರ್ಮರಾಜ ಜವಳಿ, ನಾಗರಾಜ ಮೈಲ್ವಾರ, ಸುಭಾಶ್ಚಂದ್ರ ಹಾಗೂ ಸುನೀಲ ರಾಠೋಡ ಉಪಸ್ಥಿತರಿದ್ದರು.
ಉಪನ್ಯಾಸಕರಾದ ರಮೇಶ ಮಾಡಿಯಾಳಕರ, ಡಾ. ವಿಶ್ವನಾಥ ಹೊಸಮನಿ, ಸೋಮಶೇಖರ ಚವ್ಹಾಣ, ನೀಲಮ್ಮಾ ಪಾಟೀಲ, ರೇಷ್ಮಾ ಖಾತೂನ್, ಜಮುನಾ ಟಿಳೆ, ಸುಜಾತ ರೆಡ್ಡಿ, ಡಾ. ಅತಿಯಾ ಸುಲ್ತಾನ, ಇಂದುಕಲಾ, ಸಂಗೀತಾ ಬುಳ್ಳಾ ಹಾಗೂ ಸಿಬ್ಬಂದಿಗಳಾದ ದೇವೇಂದ್ರ ನೇಲೂಗಿ, ರೇಖಾ ಸೇರಿದಂತೆ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.



