ಕೋಲಿ-ಕಬ್ಬಲಿಗ ಸಮಾಜಕ್ಕೆ ಸಚಿವ ಸ್ಥಾನ ನೀಡದಿದ್ದರೆ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ: ಮಲ್ಲಿಕಾರ್ಜುನ ಗೋಸಿ

ಯಾದಗಿರಿ: ರಾಜ್ಯ ಸಚಿವ ಸಂಪುಟದಲ್ಲಿ ಉಳಿದಿರುವ ಒಂದು ಸಚಿವ ಸ್ಥಾನವನ್ನು ಕೋಲಿ–ಕಬ್ಬಲಿಗ ಸಮುದಾಯಕ್ಕೆ ನೀಡಬೇಕು. ಇಲ್ಲವಾದರೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಾಗುವುದು ಎಂದು ಜಿಲ್ಲಾ ಕೋಲಿ–ಕಬ್ಬಲಿಗ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಗೋಸಿ ಎಚ್ಚರಿಕೆ ನೀಡಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಸಿಸಿ ಬಿಡುಗಡೆ ಮಾಡಿದ್ದ ಸಚಿವರ ಪಟ್ಟಿಯಲ್ಲಿ ಮಂಕಾಳ ವೈದ್ಯ ಅವರ ಹೆಸರು ಇದ್ದರೂ, ಅಂತಿಮವಾಗಿ ಅವರನ್ನು ಕೈಬಿಟ್ಟು ಬೇರೆ ಸಮಾಜದವರಿಗೆ ಅವಕಾಶ ನೀಡಲಾಗಿದೆ. ಇದರಿಂದ ರಾಜ್ಯದ ಸುಮಾರು 50 ಲಕ್ಷ ಕೋಲಿ–ಕಬ್ಬಲಿಗ ಸಮುದಾಯದ ಜನರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ಮಂಕಾಳ ವೈದ್ಯ ಅವರಿಗೆ ಸಚಿವ ಸ್ಥಾನ ನೀಡಲು ಸಾಧ್ಯವಾಗದಿದ್ದರೆ, ನಮ್ಮ ಭಾಗದ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರಿಗೆ ಅವಕಾಶ ನೀಡಬಹುದಾಗಿತ್ತು. ಆದರೆ ಅವರಿಗೆ ಸಹ ಅವಕಾಶ ನೀಡದೆ ಸಮುದಾಯವನ್ನು ಕಡೆಗಣಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜಕೀಯವಾಗಿ ಸಮಾಜಕ್ಕೆ ಆಗಿರುವ ಅನ್ಯಾಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಮತದಾನಕ್ಕೂ ಮುನ್ನ ಸಮಾಜದ ಹಿತ ಕಾಪಾಡಿದವರನ್ನು ಬೆಂಬಲಿಸಿ, ನಿರ್ಲಕ್ಷ್ಯ ವಹಿಸಿದವರಿಗೆ ಮತ ನೀಡಬಾರದು ಎಂಬ ಸಂದೇಶವನ್ನು ಮನೆಮನೆಗೆ ತಲುಪಿಸಲಾಗುವುದು ಎಂದು ಹೇಳಿದರು.
ಗುರುಮಠಕಲ್ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡರೇ ಬಾಬುರಾವ್ ಚಿಂಚನಸೂರ್ ಅವರನ್ನು ಸೋಲಿಸುವ ಕೆಲಸ ಮಾಡಿದ್ದಾರೆ. ಅದರ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ. ಮುಂಬರುವ ಚುನಾವಣೆಯಲ್ಲಿ ಅದಕ್ಕೆ ತಕ್ಕ ಉತ್ತರ ನೀಡಲಾಗುವುದು ಎಂದು ಗೋಸಿ ಹೇಳಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಕೋಲಿ–ಕಬ್ಬಲಿಗ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಒಂದೇ ಒಂದು ಸ್ಥಾನ ನೀಡದಿರುವುದು ನ್ಯಾಯವೇ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮಲ್ಲು ಪೂಜಾರಿ, ಬಸವರಾಜಪ್ಪ ಕೋಲಕರ, ನಿಂಗಪ್ಪ ಜಾಲಗಾರ, ಭೀಮರೆಡ್ಡಿ ಯರಗೋಳ, ಬಸವರಾಜಪ್ಪ ಬಾಗಲಿ, ಮಹಾದೇವಪ್ಪ ಗಣಪುರ, ಅಯ್ಯಪ್ಪ ನಾಯ್ಕೋಡಿ ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.



