ಜಿಲ್ಲಾಸುದ್ದಿಗಳು

ಕನಕದಾಸರ ಸಾಹಿತ್ಯ ಮಾನವೀಯ ಮೌಲ್ಯಗಳ ದಾರಿದೀಪ: ಡಾ. ಶಿವರಂಜನ್ ಸತ್ಯಂಪೇಟೆ

ಕಲಬುರಗಿ, ಆ.5: ಮನದ ಮೈಲಿಗೆಯನ್ನು ತೊಳೆದುಕೊಳ್ಳಬೇಕಾದರೆ ಕನಕದಾಸರ ಸಾಹಿತ್ಯದಲ್ಲಿರುವ ಸಾತ್ವಿಕ ನೆಲೆಗಟ್ಟನ್ನು ಪ್ರತಿಯೊಬ್ಬರೂ ಅರ್ಥೈಸಿಕೊಳ್ಳಬೇಕು ಎಂದು ಪತ್ರಕರ್ತ ಹಾಗೂ ಲೇಖಕ ಡಾ. ಶಿವರಂಜನ್ ಸತ್ಯಂಪೇಟೆ ಹೇಳಿದರು.

ನಗರದ ಎಂ.ಎನ್. ದೇಸಾಯಿ ಪದವಿ ಮಹಾವಿದ್ಯಾಲಯದಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕಲಾನಿಕೇತನ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ‘ಕನ್ನಡದ ಸಂತಕವಿ ಕನಕದಾಸರ ಕುರಿತು ಕನಕ ದರ್ಶನ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನಕದಾಸರು ಕೇವಲ ಕವಿಗಳಷ್ಟೇ ಅಲ್ಲ, ಬಂಡಾಯ ಬರಹಗಾರರು, ತತ್ವಪದಕಾರರು, ದಾಸರು, ದಂಡನಾಯಕರು ಹಾಗೂ ಸಮಾಜ ಸುಧಾರಕರಾಗಿಯೂ ಗುರುತಿಸಿಕೊಂಡಿದ್ದರು. ತಮ್ಮ ಸಾಹಿತ್ಯದ ಮೂಲಕ ಮಾನವೀಯ ಮೌಲ್ಯಗಳು, ಸಮಾನತೆ ಮತ್ತು ಸಾಮಾಜಿಕ ಜಾಗೃತಿಯನ್ನು ಬಿತ್ತಿದ ಮಹಾನ್ ಚಿಂತಕರಾಗಿದ್ದರು ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಯುವ ಮುಖಂಡ ತಿರುಪತಿ ಹತ್ತಿಕಟಗಿ ಮಾತನಾಡಿ, ಸಮಾಜದಲ್ಲಿ ಬೇರೂರಿರುವ ಮೂಢನಂಬಿಕೆ ಮತ್ತು ಗೊಡ್ಡ ಸಂಪ್ರದಾಯಗಳ ವಿರುದ್ಧ ಕನಕದಾಸರು ಧ್ವನಿ ಎತ್ತಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದ್ದರು. ಅವರ ಬದುಕು, ಜ್ಞಾನ ಮತ್ತು ತತ್ವಗಳು ಇಂದಿನ ಯುವಜನತೆಗೆ ಆದರ್ಶವಾಗಿದ್ದು, ವಿದ್ಯಾರ್ಥಿಗಳು ಅವರ ಚಿಂತನೆಗಳನ್ನು ಆಳವಾಗಿ ಅಧ್ಯಯನ ಮಾಡುವ ಅಗತ್ಯವಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಎನ್. ದೇಸಾಯಿ ಪದವಿ ಮಹಾವಿದ್ಯಾಲಯದ ಕಾರ್ಯದರ್ಶಿ ಜಗನ್ನಾಥ ನಾಗೂರ ವಹಿಸಿದ್ದರು.

ವೇದಿಕೆಯಲ್ಲಿ ಪ್ರಜ್ಞಾ ಸೇವಾ ಸಂಸ್ಥೆಯ ಅಧ್ಯಕ್ಷ ಕಾಶಿನಾಥ ಮರತೂರ, ಸಮಾಜಸೇವಕ ಹಾಗೂ ವಕೀಲ ಹಣಮಂತ ಅಟ್ಟೂರ, ಹಾಸ್ಯ ಕಲಾವಿದ ಗುಂಡಣ್ಣ ಡಿಗಿ, ಕಲಾನಿಕೇತನ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಸಂದೀಪ್ ದೇಸಾಯಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಲಾನಿಕೇತನ ಟ್ರಸ್ಟ್ ಅಧ್ಯಕ್ಷ ಬಸವರಾಜ ಶಿಣ್ಣೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಬಿಕಾ ಪಾಟ್ನಾ ಕಾರ್ಯಕ್ರಮ ನಿರೂಪಿಸಿದರು. ನಾಗರಾಜ ಪಟ್ಟಣಕರ ಸ್ವಾಗತಿಸಿ, ಡಿ.ಪಿ. ಸಜ್ಜನ್ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button