ಕಲಬುರಗಿಜಿಲ್ಲೆ ಸುದ್ದಿ

ವಚನಗಳಿಗೆ ಕುಂಚದ ಜೀವ: ಬಸವಾದಿ ಶರಣರ ಸಂದೇಶ ಚಿತ್ರಕಲೆಯಲ್ಲಿ ಅನಾವರಣ

ಕಲಬುರಗಿ, ಆ.30: ಬಸವಾದಿ ಶರಣರ ವಚನಗಳ ಆಶಯಗಳನ್ನು ಕುಂಚದ ಮೂಲಕ ದೃಶ್ಯರೂಪಕ್ಕೆ ತರುವ ಮೂಲಕ ಹಿರಿಯ ಚಿತ್ರಕಲಾವಿದ ಡಾ. ಎ.ಎಸ್. ಪಾಟೀಲ ಅವರು ಅಪೂರ್ವ ಚಿತ್ರಕಲಾ ಪ್ರದರ್ಶನ ಆಯೋಜಿಸಿದ್ದಾರೆ.

ನಗರದ ಕನ್ನಡ ಭವನದ ಕಲಾ ಸೌಧದಲ್ಲಿ ನಡೆಯುತ್ತಿರುವ ವಚನ ಸಾಹಿತ್ಯ ಸಮ್ಮೇಳನದ ಅಂಗವಾಗಿ ಶರಣ ಸಂಸ್ಕೃತಿ ದೃಶ್ಯಕಲಾ ಸಂಗ್ರಹಾಲಯ ಹಾಗೂ ಸಂಶೋಧನಾ ಕೇಂದ್ರದ ವತಿಯಿಂದ ಆಯೋಜಿಸಿರುವ ಈ ಪ್ರದರ್ಶನದಲ್ಲಿ ಬಸವಾದಿ ಶರಣರ ವಚನಗಳನ್ನು ಆಧರಿಸಿದ ಚಿತ್ರಕೃತಿಗಳು ಗಮನ ಸೆಳೆಯುತ್ತಿವೆ. ವಚನಗಳ ಆಶಯಕ್ಕೆ ತಕ್ಕಂತೆ ಕಲಾಕೃತಿಗಳನ್ನು ರೂಪಿಸಲಾಗಿದ್ದು, ವಚನಗಳ ತಾತ್ವಿಕ ಸಂದೇಶವನ್ನು ದೃಶ್ಯಮಾಧ್ಯಮದ ಮೂಲಕ ಜನರಿಗೆ ತಲುಪಿಸುವ ಪ್ರಯತ್ನ ನಡೆದಿದೆ.

ಪ್ರದರ್ಶನಕ್ಕೆ ಚಾಲನೆ ನೀಡಿದ ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ. ಸಿದ್ದು ಪಾಟೀಲ ಮಾತನಾಡಿ, ಜಾತಿ, ಮತ, ಲಿಂಗದ ಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುವ ಸಂದೇಶವನ್ನು ವಚನಗಳು ನೀಡುತ್ತವೆ. ‘ಇವನಾರವ, ಇವನಾರವ, ಇವನಾರವ ಎನ್ನದೆ, ಇವ ನಮ್ಮವ, ಇವ ನಮ್ಮವ’ ಎಂಬ ಆಶಯ ಇಂದಿನ ಸಮಾಜದಲ್ಲಿ ಪ್ರೀತಿ ಮತ್ತು ಸಾಮರಸ್ಯ ಬೆಳೆಸಲು ಪ್ರೇರಣೆಯಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜಿಲ್ಲೆಯಲ್ಲಿ ನದಿಯಂತೆ ನಿರಂತರವಾಗಿ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುತ್ತಿರುವುದು ರಾಜ್ಯಕ್ಕೆ ಮಾದರಿಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಬಸವಾದಿ ಶರಣರ ವಚನಗಳು ಕನ್ನಡದ ನಿಜವಾದ ಅಸ್ಮಿತೆಯಾಗಿದ್ದು, ಬದುಕನ್ನು ಅರ್ಥಪೂರ್ಣವಾಗಿ ಕಟ್ಟಿಕೊಳ್ಳಲು ಮಾರ್ಗದರ್ಶನ ನೀಡುತ್ತವೆ. ಆಧುನಿಕ ಸಂದರ್ಭದಲ್ಲಿ ಅನೇಕ ಲೇಖಕರು ವಚನಗಳ ಮಾದರಿಯನ್ನು ಅನುಸರಿಸಿ ಮೌಲ್ಯಯುತ ಸಾಹಿತ್ಯ ರಚಿಸಿದ್ದಾರೆ. ವಚನಗಳು ಆದರ್ಶ ಬದುಕಿಗೆ ಪೂರಕವಾಗಿವೆ ಎಂದು ಹೇಳಿದರು.

ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ಮಲ್ಲಿಕಾರ್ಜುನ ವಡ್ದನಕೇರಿ ಮಾತನಾಡಿ, ವಚನಗಳು ಬದುಕಿನ ಸತ್ಯಗಳನ್ನು ಎತ್ತಿಹಿಡಿಯುತ್ತವೆ. ಅವು ಕೇವಲ ಕಾವ್ಯವಲ್ಲ; ಮನುಷ್ಯ ಹೇಗೆ ತನ್ನ ಬದುಕನ್ನು ರೂಪಿಸಿಕೊಳ್ಳಬೇಕು ಎಂಬ ಸಂದೇಶವನ್ನು ನೀಡುತ್ತವೆ. ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶರಣ ಸಾಹಿತ್ಯ ಪರಿಷತ್ತು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಡಾ. ಗಣಪತಿ ಸಿಂಧೆ, ರೈತಪರ ಹೋರಾಟಗಾರ ದಯಾನಂದ ಪಾಟೀಲ ಕಮಲಾನಗರ, ವಚನಪ್ರಿಯ ಜಗದೀಶ ಮರಪಳ್ಳಿ, ಮಹಿಳಾಪರ ಸಂಘಟಕಿ ಸರೋಜಿನಿ ಎಸ್. ಮಯೂರ್, ಕಲಾ ಸೌಧದ ಸಂಚಾಲಕ ಡಾ. ರೆಹಮಾನ್ ಪಟೇಲ್, ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎಂ. ಪಾಟೀಲ ಕಲಬುರಗಿ, ಹಿರಿಯ ಚಿತ್ರಕಲಾವಿದ ಡಾ. ಎ.ಎಸ್. ಪಾಟೀಲ, ಕಸಾಪ ಜಿಲ್ಲಾ ಕಾರ್ಯದರ್ಶಿ ಶಿವರಾಜ ಅಂಡಗಿ, ಜಯಶ್ರೀ ಜಮಾದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಚನ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಭಾನುವಾರ ನಗರದ ಕನ್ನಡ ಭವನದಲ್ಲಿ ಕಲಬುರಗಿ ವಿಭಾಗದ ಪ್ರಥಮ ವಚನ ಸಾಹಿತ್ಯ ಸಮ್ಮೇಳನ ನಡೆಯಲಿದೆ.

ನೇಳೋಗಿ ವಿರಕ್ತ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳ ಸರ್ವಾಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನಕ್ಕೆ ಸಾರಂಗಮಠದ ಜಗದ್ಗುರು ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ಹಿರಿಯ ಲೇಖಕಿ ಡಾ. ಜಯದೇವಿ ಗಾಯಕ್ವಾಡ್ ಸಮ್ಮೇಳನ ಉದ್ಘಾಟಿಸಲಿದ್ದು, ಪದ್ಮಶ್ರೀ ಪುರಸ್ಕೃತ ಡಾ. ವಿಜಯಲಕ್ಷ್ಮಿ ದೇಶಮಾನೆ, ಡಾ. ಮಲ್ಲಿಕಾರ್ಜುನ ವಡ್ದನಕೇರಿ, ರವಿ ವಿಭೂತಿ ಹಾಗೂ ಬಿ.ಎಂ. ಪಾಟೀಲ ಕಲಬುರಗಿ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.

‘ಮಾತೆಂಬುದು ಜ್ಯೋತಿರ್ಲಿಂಗ’ ಗೋಷ್ಠಿಯಲ್ಲಿ ವಚನ ಸಾಹಿತ್ಯ ಮತ್ತು ಸಂವಿಧಾನದ ಕುರಿತು ಡಾ. ಶಿವರಂಜನ್ ಸತ್ಯಂಪೇಟೆ, ವಚನ ಸಾಹಿತ್ಯ ಮತ್ತು ಮಹಿಳಾ ಸಂವೇದನೆ ಕುರಿತು ಡಾ. ವಿದ್ಯಾವತಿ ಬಲೂರು ಮಾತನಾಡಲಿದ್ದಾರೆ. ಹಿರಿಯ ಸಾಹಿತಿ ಡಾ. ಶ್ರೀಶೈಲ ನಾಗರಾಳ ಸಮಾರೋಪ ನುಡಿಗಳನ್ನಾಡಲಿದ್ದಾರೆ.

ಸಮ್ಮೇಳನದ ಅಂಗವಾಗಿ ಸಾಧಕರಿಗೆ ‘ಕಾಯಕ ರತ್ನ’ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಗುವುದು. ಸಂಗೀತ ಕಲಾವಿದ ರೇವಯ್ಯ ವಸ್ತ್ರದ ಮಠ ಅವರಿಂದ ವಚನ ಗಾಯನ ಕಾರ್ಯಕ್ರಮವೂ ನಡೆಯಲಿದೆ.

Related Articles

Leave a Reply

Your email address will not be published. Required fields are marked *

Back to top button