ಯಾದಗಿರಿ

ಹೆಡಗಿಮದ್ರಿ ಗ್ರಾಮದಲ್ಲಿ ಮೂಲಸೌಕರ್ಯ ಕೊರತೆ: ತಮಟೆ ಬಾರಿಸಿ ವಿನೂತನ ಪ್ರತಿಭಟನೆ

ಯಾದಗಿರಿ: ಸ್ವಾತಂತ್ರ್ಯ ದೊರೆತು 80 ವರ್ಷ ಕಳೆದರೂ ಯಾದಗಿರಿ ತಾಲ್ಲೂಕಿನ ಹೆಡಗಿಮದ್ರಿ ಗ್ರಾಮದಲ್ಲಿ ಮೂಲಸೌಕರ್ಯಗಳ ಕೊರತೆ ನೀಗಿಲ್ಲ. ಗ್ರಾಮದಲ್ಲಿ ಚರಂಡಿ, ಸಿಸಿ ರಸ್ತೆ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲ. ಇದರಿಂದಾಗಿ ಕಲುಷಿತ ನೀರು ರಸ್ತೆ ಬದಿಯ ತಗ್ಗು ಪ್ರದೇಶಗಳಲ್ಲಿ ನಿಂತು ದುರ್ವಾಸನೆ ಬೀರುತ್ತಿದ್ದು, ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಆರೋಪಿಸಿದರು.

ಶನಿವಾರ ಬೆಳಿಗ್ಗೆ ಗ್ರಾಮಕ್ಕೆ ದಿಢೀರ್ ಭೇಟಿ ನೀಡಿದ ಅವರು, ಗಂಗಾನಗರ ಹಾಗೂ ಭೀಮನಗರದ ಪ್ರಮುಖ ಬೀದಿಗಳಲ್ಲಿ ಕಾಲ್ನಡಿಗೆಯಲ್ಲಿ ಸಂಚರಿಸಿ ಸಮಸ್ಯೆಗಳನ್ನು ಪರಿಶೀಲಿಸಿದರು. ಬಳಿಕ ಗ್ರಾಮಸ್ಥರು ಹಾಗೂ ಮಹಿಳೆಯರೊಂದಿಗೆ ಕೈಯಲ್ಲಿ ಕಾಲಿಕೊಡಲಿ ಹಿಡಿದು, ತಮಟೆ ಬಾರಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

ಗ್ರಾಮದ ಹಲವೆಡೆ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಕೊಳಚೆ ನೀರು ತಗ್ಗು ಪ್ರದೇಶಗಳಲ್ಲಿ ಸಂಗ್ರಹವಾಗುತ್ತಿದೆ. ಇದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಡೆಂಗಿ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಜನರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದರು.

ಗ್ರಾಮದಲ್ಲಿರುವ ಕೈಪಂಪ್ ಹಾಗೂ ಬೋರ್‌ವೆಲ್‌ಗಳು ಕೆಟ್ಟು ನಿಂತಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಗ್ರಾಮಕ್ಕೆ ಸಮೀಪದಲ್ಲೇ ಭೀಮಾ ನದಿ ಹರಿಯುತ್ತಿದ್ದರೂ ಜನರು ಹಾಗೂ ಜಾನುವಾರುಗಳಿಗೆ ಸಮರ್ಪಕ ನೀರು ದೊರೆಯದಿರುವುದು ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಅವರು ದೂರಿದರು.

ಗ್ರಾಮದಿಂದ ಭೀಮಾ ನದಿಗೆ ತೆರಳುವ ರಸ್ತೆಯ ಎರಡೂ ಬದಿಗಳಲ್ಲಿ ಜಾಲಿ ಕಂಟಿಗಳು ಬೆಳೆದು ದಾರಿ ಬಂದ್ ಆಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರೈತರು ತಮ್ಮ ಜಮೀನುಗಳಿಗೆ ತೆರಳಲು ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು, ರಸ್ತೆಗಳಲ್ಲಿನ ಕೆಸರು ಮತ್ತು ಗುಂಡಿಗಳಿಂದಾಗಿ ದ್ವಿಚಕ್ರ ವಾಹನ ಸವಾರರು ನಿತ್ಯ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

‘ಗ್ರಾಮಗಳ ಅಭಿವೃದ್ಧಿಗಾಗಿ ಸರ್ಕಾರದಿಂದ ಲಕ್ಷಾಂತರ ರೂಪಾಯಿ ಅನುದಾನ ಬರುತ್ತಿದ್ದರೂ, ಹೆಡಗಿಮದ್ರಿಯಲ್ಲಿ ಮೂಲಭೂತ ಸೌಲಭ್ಯಗಳು ಏಕೆ ಇಲ್ಲ ಎಂಬುದು ಅರ್ಥವಾಗುತ್ತಿಲ್ಲ. ಅಭಿವೃದ್ಧಿಗೆ ಬಿಡುಗಡೆಯಾಗುವ ಹಣ ಎಲ್ಲಿ ಹೋಗುತ್ತಿದೆ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕು’ ಎಂದು ಉಮೇಶ ಕೆ. ಮುದ್ನಾಳ ಆಕ್ರೋಶ ವ್ಯಕ್ತಪಡಿಸಿದರು.

24 ಗಂಟೆಯೊಳಗೆ ಸಂಬಂಧಿಸಿದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸಿ ಪರಿಹಾರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಯಾದಗಿರಿ ಜಿಲ್ಲಾಡಳಿತ ಭವನದ ಮುಂಭಾಗದ ಮುಖ್ಯ ರಸ್ತೆಯನ್ನು ತಡೆದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.

ಅಖಿಲ ಭಾರತ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿರುವ ಉಮೇಶ ಕೆ. ಮುದ್ನಾಳ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪವನ ಭೀಮರಾಯ, ಚಂದ್ರಮ್, ಸೋಮಪ್ಪ, ರಾಮಯ್ಯ, ಶಿವಪ್ಪ, ಲೋಕೇಶ್, ಚಿದಾನಂದ, ನಬಿ ರಸೂಲ್, ಹನಮಂತ, ಅಯ್ಯಪ್ಪ, ಹುಸೇನಿ ಶಿವಪ್ಪ, ದೊಡ್ಮಲ್ಲಪ್ಪ, ಬಸವರಾಜ, ಮರೆಪ್ಪ, ಮಾಲೇಶಿ, ಕಡ್ಲಪ್ಪ, ಚಂದಪ್ಪ, ಸಾಗರ, ಚನಪ್ಪ, ದೇವಪ್ಪ, ನಬಿ, ನಾಗು, ಚಂದ್ರು, ಆಂಜನೇಯ, ಬಾಗಣ್ಣ, ಮೌನೇಶ್, ಈರಪ್ಪ, ತಾಯ್ಯಪ್ಪ, ಮರೆಪ್ಪ, ರಾಮು, ಸಿದ್ದಪ್ಪ, ರವಿ, ಅಶೋಕ್, ದುರ್ಗಪ್ಪ, ಶಿವಯ್ಯ, ಶಿವಕುಮಾರ್, ರಮೇಶ್, ತಿರುಪತಿ, ನಾಗಪ್ಪ, ಸಾಗಮಾ, ಸಾಬಯ್ಯ, ಅನಿಲ್, ತಿಪಣ್ಣ, ಮುರುಳಿ, ಬಸ್ಸು, ಗುಲಾಮ್, ಶರಣಪ್ಪ, ಕೋನಪ್ಪ, ಗಂಗಾಧರ, ಚಂದ್ರಪ್ಪ, ಆಜಿರಾಭಿ, ರೇಣುಕಮ್ಮ, ಶಾರಮ್ಮ, ಮಾರೆಮ್ಮ, ಬಸ್ಸಮ್ಮ, ಸೌಭಾಗ್ಯಮ್ಮ, ಲಲಿತಮ್ಮ, ಹನಮಂತಿ, ಹಂಪಮ್ಮ, ಹನಮವ್ವ, ಶಾಂತಮ್ಮ, ಕಮಲಮ್ಮ, ರೇಣುಕಾ, ಗಂಗವ್ವ, ಬಸಮ್ಮ, ನಾಗಮ್ಮ ಸೇರಿದಂತೆ ಗ್ರಾಮದ ಮುಖಂಡರು, ಯುವಕರು ಹಾಗೂ ಮಹಿಳೆಯರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button