ಸಾಮಾಜಿಕ ಭದ್ರತಾ ಮಾಸಾಶನ ಬಿಡುಗಡೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ಕಲಬುರಗಿ: ಚಿಂಚೋಳಿ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳು ಹಾಗೂ ಚಿಂಚೋಳಿ ಪುರಸಭೆ ವ್ಯಾಪ್ತಿಯ ಅಂಗವಿಕಲರು, ವಯೋವೃದ್ಧರು, ವಿಧವೆಯರು ಮತ್ತು ನಿರ್ಗತಿಕರಿಗೆ ಸಾಮಾಜಿಕ ಭದ್ರತಾ ಯೋಜನೆಗಳ ಮಾಸಾಶನ ಹಲವು ತಿಂಗಳುಗಳಿಂದ ಬಾಕಿ ಉಳಿದಿರುವುದನ್ನು ಖಂಡಿಸಿ ಮೂಲನಿವಾಸಿ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ತಿಮ್ಮಾಪುರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿವರೆಗೆ ಸಾಗಿದ್ದು, ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸಾಮಾಜಿಕ ಭದ್ರತಾ ಯೋಜನೆಗಳಾದ ಅಂಗವಿಕಲ ವೇತನ, ವೃದ್ಧಾಪ್ಯ ವೇತನ, ವಿಧವಾ ವೇತನ ಹಾಗೂ ಸಂಧ್ಯಾ ಸುರಕ್ಷಾ ಯೋಜನೆಗಳಿಗೆ ಅರ್ಜಿ ಸಲ್ಲಿಸಿರುವ ಅನೇಕ ಅರ್ಹ ಫಲಾನುಭವಿಗಳ ಅರ್ಜಿಗಳು ಪರಿಶೀಲನೆ, ದಾಖಲೆಗಳ ಕೊರತೆ ಹಾಗೂ ಆಡಳಿತಾತ್ಮಕ ವಿಳಂಬದ ನೆಪದಲ್ಲಿ ಹಲವು ತಿಂಗಳುಗಳಿಂದ ಬಾಕಿ ಉಳಿದಿವೆ. ಇದರಿಂದ ಮಾಸಾಶನವನ್ನೇ ಜೀವನಾಧಾರವಾಗಿಸಿಕೊಂಡಿರುವ ಬಡ ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ವಯೋವೃದ್ಧರು ಹಾಗೂ ಅಂಗವಿಕಲರು ತಮ್ಮ ಅರ್ಜಿಗಳ ಸ್ಥಿತಿ ತಿಳಿದುಕೊಳ್ಳಲು ಗ್ರಾಮ ಪಂಚಾಯಿತಿ, ನಾಡಕಚೇರಿ ಹಾಗೂ ತಹಶೀಲ್ದಾರ್ ಕಚೇರಿಗಳಿಗೆ ಪದೇಪದೇ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ವಿಶೇಷ ಮಾಸಾಶನ ಶಿಬಿರಗಳನ್ನು ಆಯೋಜಿಸಿ, ಅರ್ಹ ಫಲಾನುಭವಿಗಳಿಗೆ ಸ್ಥಳದಲ್ಲೇ ಮಂಜೂರಾತಿ ಪತ್ರ ವಿತರಿಸುವ ಜೊತೆಗೆ ಹಲವು ತಿಂಗಳುಗಳಿಂದ ಬಾಕಿ ಇರುವ ಮಾಸಾಶನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಕೆಲವು ಪ್ರಕರಣಗಳಲ್ಲಿ ಅರ್ಜಿದಾರರು ಕೇಳಿರುವ ಯೋಜನೆಗೆ ಬದಲಾಗಿ ಬೇರೆ ಯೋಜನೆಯಡಿ ಮಂಜೂರಾತಿ ನೀಡಿರುವುದು ಹಾಗೂ ಈಗಾಗಲೇ ಒಂದೇ ಯೋಜನೆಯಡಿ ಮಾಸಾಶನ ಪಡೆಯುತ್ತಿರುವವರಿಗೆ ಮತ್ತೊಮ್ಮೆ ಮಂಜೂರಾತಿ ನೀಡಿರುವ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಅರ್ಹ ಹಾಗೂ ತಿರಸ್ಕೃತ ಅರ್ಜಿಗಳ ವಿವರಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಾರ್ವಜನಿಕವಾಗಿ ಪ್ರಕಟಿಸಬೇಕು. ತಿರಸ್ಕೃತ ಅರ್ಜಿಗಳಿಗೆ ಲಿಖಿತ ಕಾರಣ ನೀಡಬೇಕು. ಅರ್ಜಿಗಳ ಸ್ಥಿತಿಯನ್ನು ಎಸ್ಎಂಎಸ್ ಅಥವಾ ಅಧಿಕೃತ ಮಾಹಿತಿ ವ್ಯವಸ್ಥೆಯ ಮೂಲಕ ಫಲಾನುಭವಿಗಳಿಗೆ ತಿಳಿಸುವ ವ್ಯವಸ್ಥೆ ಕಲ್ಪಿಸಿ, ಮಧ್ಯವರ್ತಿಗಳ ಹಸ್ತಕ್ಷೇಪಕ್ಕೆ ಅವಕಾಶವಿಲ್ಲದ ಪಾರದರ್ಶಕ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮಾಸಾಶನ ಪಡೆಯುತ್ತಿರುವ ಫಲಾನುಭವಿಗಳ ಪಟ್ಟಿಯನ್ನು ನಿಯಮಿತವಾಗಿ ಪರಿಶೀಲಿಸಿ ನಕಲಿ ಹಾಗೂ ದ್ವಂದ್ವ ಫಲಾನುಭವಿಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು. ವಯೋವೃದ್ಧರು ಹಾಗೂ ಅಂಗವಿಕಲರು ಕಚೇರಿಗಳಿಗೆ ಅಲೆದಾಡದಂತೆ ಒಂದೇ ಸ್ಥಳದಲ್ಲಿ ದಾಖಲೆ ಪರಿಶೀಲನೆ ಮತ್ತು ಅರ್ಜಿ ವಿಲೇವಾರಿ ವ್ಯವಸ್ಥೆ ಕಲ್ಪಿಸಬೇಕು. ದೈಹಿಕವಾಗಿ ಅಶಕ್ತರು ಹಾಗೂ ಹಿರಿಯ ನಾಗರಿಕರ ಅರ್ಜಿಗಳಿಗೆ ಆದ್ಯತೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಚಿಂಚೋಳಿ ತಾಲೂಕಿನ ಸಾಮಾಜಿಕ ಭದ್ರತಾ ಯೋಜನೆಗಳ ಅನುಷ್ಠಾನದ ಕುರಿತು ಜಿಲ್ಲಾಡಳಿತವು ಸಾರ್ವಜನಿಕರ ಸಮ್ಮುಖದಲ್ಲಿ ಪ್ರಗತಿ ವರದಿ ಬಿಡುಗಡೆ ಮಾಡಬೇಕು. ಮನವಿಯಲ್ಲಿರುವ ಬೇಡಿಕೆಗಳ ಕುರಿತು ತಕ್ಷಣ ಕ್ರಮ ಕೈಗೊಂಡು, ಕೈಗೊಂಡ ಕ್ರಮದ ಬಗ್ಗೆ ಸಂಘಟನೆ ಹಾಗೂ ಸಾರ್ವಜನಿಕರಿಗೆ ಲಿಖಿತ ಮಾಹಿತಿ ನೀಡಬೇಕು. ನಿಗದಿತ ಅವಧಿಯಲ್ಲಿ ಸಮಸ್ಯೆಗಳಿಗೆ ಪರಿಹಾರ ದೊರೆಯದಿದ್ದರೆ ಕಾನೂನುಬದ್ಧ ಹಾಗೂ ಪ್ರಜಾಸತ್ತಾತ್ಮಕ ರೀತಿಯಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಮಾರುತಿ ಗಂಜಗಿರಿ, ಚಂದ್ರಕಾಂತ ಭಾಗಲಕೋಟ, ಪಾರ್ವತಿ ಚಂದಾಪೂರ, ಸಂಗೀತಾ, ಮೋಹನ ಐನಾಪೂರ, ಮಾರುತಿ ಜಾದವ್, ಹೀರಾಸಿಂಗ್ ಪವಾರ್, ಮಹೇಶ್ ಕುಸರಂಪಳ್ಳಿ, ಅಮರನಾಥ ಹೂವಿನಭಾವಿ, ಮಹೇಶ್ ರಾಣಾಪೂರ, ಲಕ್ಷ್ಮೀಕಾಂತ ರಾಣಾಪೂರ, ಪ್ರಕಾಶ್ ಭಕ್ತಂಪಳ್ಳಿ, ಮಲ್ಲಿಕಾರ್ಜುನ್ ಕೊಡದೂರು, ಹರೀಶ್ ದೆಗಲಮಡಿ, ಹರ್ಷವರ್ಧನ್ ಹಿಂದಿನಮನಿ ಸೇರಿದಂತೆ ಹಲವರು ಭಾಗವಹಿಸಿದ್ದರು.



