ಸಾಧಕರಿಗೆ ಸನ್ಮಾನ: ಸಮಾಜಕ್ಕೆ ಮಾದರಿಯಾಗಲಿ ಸಾಧನೆ

ಕಲಬುರಗಿ: ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಬಂಜಾರ ಸಮುದಾಯದ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ಶ್ಲಾಘನೀಯ. ಇಂತಹ ಸಾಧಕರ ಬದುಕು ಯುವಜನತೆಗೆ ಪ್ರೇರಣೆಯಾಗಬೇಕು ಎಂದು ಗಣ್ಯರು ಅಭಿಪ್ರಾಯಪಟ್ಟರು.
ನಗರದ ಬಂಜಾರ ಭವನದಲ್ಲಿ ಬಂಜಾರ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ, ಪ್ರದೇಶ ಬಂಜಾರ ಸೇವಾ ಸಂಘ ಹಾಗೂ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗೌರವಿಸಲಾಯಿತು.
ಅಮೆರಿಕನ್ ವೆಸ್ಟರ್ನ್ ಪೀಸ್ ವಿಶ್ವವಿದ್ಯಾಲಯ ಅಸೋಸಿಯೇಷನ್ ಆಫ್ ಇಂಟರ್‌ನ್ಯಾಷನಲ್ ಕಾಲೇಜ್ ಇನ್ ಟೆಕ್ನಿಕಲ್ ಎಜುಕೇಷನ್, ಯುಎಸ್‌ಎ ವತಿಯಿಂದ ಗೌರವ ಡಾಕ್ಟರೇಟ್ ಪಡೆದ ಅನಿಲ್ ಸಾಹೇಬ್ ಮಹಾರಾಜ್ (ತರಿತಾಂಡ) ಅವರನ್ನು ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದ ಸಾಧನೆಗಾಗಿ ಸನ್ಮಾನಿಸಲಾಯಿತು.
ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದ ಸಾಧನೆಗಾಗಿ ಬಿ.ಬಿ. ನಾಯಕ್ ಹಾಗೂ ಮಾಧ್ಯಮ ಮತ್ತು ಪತ್ರಿಕೋದ್ಯಮ ಕ್ಷೇತ್ರದ ಸೇವೆಗಾಗಿ ಆಲ್ ಇಂಡಿಯಾ ಬಂಜಾರ ಸಂದೇಶ್ ಟಿವಿ ಸಂಸ್ಥಾಪಕ ಸುಭಾಷ್ ಚವಾಣ್ ಅವರನ್ನು ಗೌರವಿಸಲಾಯಿತು.
ರಾಷ್ಟ್ರೀಯ ಸಲಹೆಗಾರರಾಗಿ ಆಯ್ಕೆಯಾದ ಪ್ರೇಮ್ ಸಿಂಗ್ ಚೌಹಾಣ್ ಹಾಗೂ ವೃತ್ತಿಯಿಂದ ನಿವೃತ್ತರಾದ ಗುರುನಾಥ್ ರಾಥೋಡ್ ಅವರನ್ನೂ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕೆಸರಟಗಿ ಸುಕ್ಷೇತ್ರದ ಪರಮಪೂಜ್ಯ ಮಾತೋಶ್ರೀ ಲತಾದೇವಿ ಹಾಗೂ ನವಶಕ್ತಿ ಪೀಠದ ಮುರಹರಿ ಮಹಾರಾಜರು ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಬಂಜಾರ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಬು ಎಂ. ಜಾಧವ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘವು ಸುಮಾರು 45 ವರ್ಷಗಳಿಂದ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಸಮಾಜದ ಶ್ರೇಯೋಭಿವೃದ್ಧಿಗಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಸಮಾಜ ಸೇವೆಯಲ್ಲಿ ತೊಡಗಿರುವ ಸಾಧಕರನ್ನು ಗುರುತಿಸಿ ಗೌರವಿಸುವುದು ಸಂಘದ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ ಎಂದರು.
ಸಂಘದ ಜಿಲ್ಲಾಧ್ಯಕ್ಷ ಹರಿಶ್ಚಂದ್ರ ಎಸ್. ರಾಥೋಡ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮೌಲ್ಯಾಧಾರಿತ ಸಮಾಜ ನಿರ್ಮಾಣ ಹಾಗೂ ಸಾಮಾಜಿಕ ಜಾಗೃತಿಗೆ ಶ್ರಮಿಸುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ತಾರಾನಾಥ್ ಚವಾಣ್, ಎಸ್.ಎಂ. ರಾಥೋಡ್, ಕೆ.ಎಸ್. ನಾಯಕ್ ರಾಥೋಡ್, ಸತೀಶ್ ಚವಾಣ್, ಸೋಮು ರಾಥೋಡ್, ಸಂತೋಷ್ ಚವಾಣ್, ರಾಜೇಂದ್ರ ರಾಥೋಡ್, ದೇವಿದಾಸ್ ಚವಾಣ್, ಗೋಪಾಲ್ ರಾಥೋಡ್, ಅನಿಲ್ ಚವಾಣ್, ರಾಕೇಶ್ ಚವಾಣ್, ಖೇಮಸಿಂಗ್ ಪವಾರ್ ಸೇರಿದಂತೆ ಸಮಾಜದ ಗಣ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ನೌಕರ ಬಂಧುಗಳು ಪಾಲ್ಗೊಂಡಿದ್ದರು.



