ಜಿಲ್ಲೆ ಸುದ್ದಿಯಾದಗಿರಿ

ಗ್ರಾಮದಲ್ಲೇ ಉದ್ಯೋಗ ಪಡೆದು ವಲಸೆ ತಪ್ಪಿಸಿ: ಉಮೇಶ ಮುದ್ನಾಳ

ಯಾದಗಿರಿ: ಮಳೆ ಕೊರತೆಯಿಂದ ಬೆಳೆಗಳು ಹಾಳಾಗಿ ರೈತರು ಹಾಗೂ ಕೃಷಿ ಕೂಲಿ ಕಾರ್ಮಿಕರು ಉದ್ಯೋಗ ಅರಸಿ ಮಹಾನಗರಗಳಿಗೆ ವಲಸೆ ಹೋಗುತ್ತಿರುವುದು ಹೆಚ್ಚಾಗಿದೆ. ಇದನ್ನು ತಡೆಯಲು ಸರ್ಕಾರದ ವಿಬಿಜಿ ರಾಮ್ ಜಿ ಯೋಜನೆಯಡಿ ಗ್ರಾಮದಲ್ಲಿಯೇ ಉದ್ಯೋಗ ಪಡೆದುಕೊಳ್ಳುವಂತೆ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಮನವಿ ಮಾಡಿದರು.

ತಾಲ್ಲೂಕಿನ ಠಾಣಗುಂದಿ ತಾಂಡಾ (ವಿಶ್ವಾಸಪುರ)ದ ಸೇವಾಲಾಲ ಮಂದಿರ ಆವರಣದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದ ಯೋಜನೆಯ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರು ಹಾಗೂ ನಿರುದ್ಯೋಗಿಗಳಿಗೆ ಯೋಜನೆಯ ಉದ್ದೇಶ ಮತ್ತು ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಯೋಜನೆಯಡಿ ಪಂಚಾಯಿತಿ ಮಟ್ಟದಲ್ಲಿ ದಿನಗೂಲಿ ₹382ರಂತೆ ಒಂದು ಆರ್ಥಿಕ ವರ್ಷದಲ್ಲಿ ಗರಿಷ್ಠ 125 ದಿನಗಳವರೆಗೆ ಉದ್ಯೋಗ ದೊರೆಯಲಿದೆ. ಆದ್ದರಿಂದ ಮಹಾನಗರಗಳಿಗೆ ವಲಸೆ ಹೋಗುವ ಬದಲು ಅಗತ್ಯ ದಾಖಲೆಗಳನ್ನು ಸಲ್ಲಿಸಿ ತಮ್ಮದೇ ಗ್ರಾಮದಲ್ಲಿ ಉದ್ಯೋಗ ಪಡೆದುಕೊಳ್ಳಬೇಕು. ವಲಸೆಯಿಂದ ಮಕ್ಕಳ ಶಿಕ್ಷಣಕ್ಕೂ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ಕುಟುಂಬ ಸಮೇತ ಗುಳೆ ಹೋಗುವುದನ್ನು ತಪ್ಪಿಸಬೇಕು ಎಂದು ಹೇಳಿದರು.

ಠಾಣಗುಂದಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೀವ ಮಾತನಾಡಿ, ವೈಯಕ್ತಿಕ ಉದ್ಯೋಗಾವಕಾಶಗಳು, ವಿವಿಧ ಕಾಮಗಾರಿಗಳು ಹಾಗೂ ಸರ್ಕಾರಿ ಕಟ್ಟಡಗಳಿಗೆ ಸಂಬಂಧಿಸಿದ ಯುಕ್ತಿಧಾರಾ ಪೋರ್ಟಲ್ ಕುರಿತು ಮಾಹಿತಿ ನೀಡಿದರು. ಇ-ಕೆವೈಸಿ ಪೂರ್ಣಗೊಳಿಸಿರುವ ಜಾಬ್ ಕಾರ್ಡ್‌ಗಳನ್ನು ಮಾತ್ರ ಪರಿಗಣಿಸಲಾಗುವುದು. ಠಾಣಗುಂದಿ ಕೆರೆಯಲ್ಲಿ ಈಗಾಗಲೇ ಯೋಜನೆಯಡಿ ಕಾಮಗಾರಿ ನಡೆಯುತ್ತಿದ್ದು, ಇ-ಕೆವೈಸಿ ಪೂರ್ಣಗೊಳಿಸಿರುವ ಜಾಬ್ ಕಾರ್ಡ್‌ದಾರರು ಕಾಮಗಾರಿಯಲ್ಲಿ ಭಾಗವಹಿಸಿ ಉದ್ಯೋಗ ಪಡೆಯಬಹುದು ಎಂದು ತಿಳಿಸಿದರು.

ಜಾಬ್ ಕಾರ್ಡ್ ಹೊಂದಿರದವರು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಹಾಗೂ ರೇಷನ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಹೊಸ ಜಾಬ್ ಕಾರ್ಡ್ ಪಡೆದುಕೊಳ್ಳಬೇಕು. ಸರ್ಕಾರದ ಯೋಜನೆಯನ್ನು ಸದುಪಯೋಗಪಡಿಸಿಕೊಂಡು ತಮ್ಮ ಗ್ರಾಮದಲ್ಲಿಯೇ ಉದ್ಯೋಗ ಪಡೆಯಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಲಕ್ಷ್ಮಣ ಪವಾರ್, ರವಿ ರಾಠೋಡ್, ಅಂಬುಲಾಲ್ ನಾಯಕ್, ವಿಜಯ ಪವಾರ್, ಸುನಿಲ್ ರಾಠೋಡ್, ಆಕಾಶ್, ಜಗದೀಶ್ ಜಾಧವ್, ಈಶ್ವರ್ ಜಾಧವ್, ಕೇಂಸಿಂಗ್ ರಾಠೋಡ್, ಜಿಮ್ ಸಿಂಗ್ ರಾಠೋಡ್, ರವಿ ಜಾಧವ್, ಗೋಪಾಲ್ ರೆಡ್ಡಿ ಪವಾರ್, ರಾಜು ಕೆಇಬಿ, ಕೈಲಾಸ್ ಜಾಧವ್, ವಿಕಾಸ್ ಪವಾರ್, ಪ್ರಕಾಶ್ ರಾಠೋಡ್, ಭೀಮ್ ಸಿಂಗ್ ರಾಠೋಡ್, ವಿಕ್ರಂ ಪವಾರ್, ವೆಂಕಟೇಶ್, ವಿನಾಯ ರಾಠೋಡ್ ಸೇರಿದಂತೆ ಮುಖಂಡರು, ಯುವಕರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button