ಯಾದಗಿರಿ

ಗಣೇಶ ಹಬ್ಬ ಸೌಹಾರ್ದ, ಸಂಸ್ಕೃತಿಯ ಪ್ರತೀಕವಾಗಲಿ: ಸಿಪಿಐ ದೀಪಕ್ ಬೋಸ್‌ರೆಡ್ಡಿ

ಕನ್ನಡ ಭಾಷೆಗೆ ಪೊಲೀಸ್ ಇಲಾಖೆಯಿಂದ ಅವಮಾನ ಪೊಲೀಸ್ ಠಾಣೆಯಂತಹ ಜವಾಬ್ದಾರಿಯುತ ಸರ್ಕಾರಿ ವ್ಯವಸ್ಥೆಯಲ್ಲಿ ಸಾರ್ವಜನಿಕ ಸಂದೇಶ ನೀಡುವ ಬ್ಯಾನರ್‌ಗಳನ್ನು ಸಿದ್ಧಪಡಿಸುವಾಗ ಕರಡು ತಿದ್ದುಪಡಿ ಮಾಡುವುದು ಕಡ್ಡಾಯ.ತಪ್ಪುಗಳಿದ್ದರೂ, ಅದನ್ನು ಪರಿಶೀಲಿಸದೆ ವೇದಿಕೆಯಲ್ಲಿ ಅಳವಡಿಸುವುದು ಆಡಳಿತಾತ್ಮಕ ನಿರ್ಲಕ್ಷ್ಯ ಹಾಗೂ ಸಿಬ್ಬಂದಿಯ ಅಜಾಗರೂಕತೆಯನ್ನೇ ತೋರಿಸುತ್ತದೆ. ಕನ್ನಡ ಭಾಷೆಯ ಮಹತ್ವ ನಾಡಿನ ಆಡಳಿತ ಭಾಷೆಯಾದ ಕನ್ನಡವನ್ನು ಸರ್ಕಾರಿ ಕಾರ್ಯಕ್ರಮಗಳಲ್ಲಿ ದೋಷವಿಲ್ಲದೆ ಬಳಸುವುದು ಇಲಾಖೆಯ ಕರ್ತವ್ಯ. ಅಕ್ಷರ ದೋಷಗಳು ಅಥವಾ ವ್ಯಾಕರಣ ತಪ್ಪುಗಳು ಇಲಾಖೆಯ ಗಾಂಭೀರ್ಯವನ್ನು ಕುಗ್ಗಿಸುತ್ತವೆ. ಕನ್ನಡ ಭಾಷೆಗೆ ಮಾಡಿರುವ ಅವಮಾನ.

ಕೆಂಭಾವಿ: ಗಣೇಶ ಚತುರ್ಥಿ ಕೇವಲ ಧಾರ್ಮಿಕ ಆಚರಣೆಯಲ್ಲ. ಸಮಾಜದ ವಿವಿಧ ಸ್ತರದ ಜನರನ್ನು ಒಗ್ಗೂಡಿಸಿ, ಸಾಮಾಜಿಕ ಸಾಮರಸ್ಯ ಹಾಗೂ ಸೌಹಾರ್ದ ಸಾರುವ ಮಹತ್ವದ ಸಾಂಸ್ಕೃತಿಕ ಹಬ್ಬವಾಗಿದೆ ಎಂದು ಸಿಪಿಐ ದೀಪಕ್ ಬೋಸ್‌ರೆಡ್ಡಿ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ಆಯೋಜಿಸಿದ್ದ ಶಾಂತಿ ಮತ್ತು ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸಂಬಂಧಿಸಿದ ಇಲಾಖೆಗಳ ಪೂರ್ವಾನುಮತಿ ಕಡ್ಡಾಯವಾಗಿ ಪಡೆಯಬೇಕು. ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಗಳು ಹೊರಡಿಸಿರುವ ಎಲ್ಲ ನಿಯಮಾವಳಿಗಳನ್ನು ಉತ್ಸವ ಸಮಿತಿಗಳು ಮತ್ತು ಸಾರ್ವಜನಿಕರು ಚಾಚೂತಪ್ಪದೆ ಪಾಲಿಸಬೇಕು ಎಂದು ಅವರು ಸೂಚಿಸಿದರು.

ಹಬ್ಬದ ಸಂದರ್ಭದಲ್ಲಿ ಡಿಜೆ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ನಿಗದಿತ ಡೆಸಿಬಲ್ ಮಿತಿಯೊಳಗೆ ಮಾತ್ರ ಧ್ವನಿವರ್ಧಕಗಳನ್ನು ಬಳಸಬೇಕು. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಉತ್ಸವ ಸಮಿತಿಗಳು ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಜಾತಿ, ಮತ, ಧರ್ಮದ ಭೇದವಿಲ್ಲದೆ ಸಮಾಜದ ಹಿರಿಯರು, ಯುವಕರು ಹಾಗೂ ಮಕ್ಕಳು ಒಟ್ಟಾಗಿ ಹಬ್ಬವನ್ನು ಆಚರಿಸಿದಾಗ ಗಣೇಶೋತ್ಸವಕ್ಕೆ ನಿಜವಾದ ಅರ್ಥ ಬರುತ್ತದೆ. ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದ್ದು, ಸಾರ್ವಜನಿಕರ ಸಹಕಾರಕ್ಕೆ ಪೊಲೀಸ್ ಇಲಾಖೆ ಸದಾ ಸಿದ್ಧವಿದೆ ಎಂದು ತಿಳಿಸಿದರು.

ಸಭೆಯಲ್ಲಿ ಪಿಎಸ್ಐ ಅಮೋಜ ಕಾಂಬಳೆ, ಕ್ರೈಂ ಪಿಎಸ್ಐ ಹಣಮಂತರಾಯ ಸಿದ್ದಾಪುರ, ಜಸ್ಕಾಂ ಇಲಾಖೆಯ ಚಿದಾನಂದ್, ಕಂದಾಯ ಇಲಾಖೆಯ ಕಾಶಿನಾಥ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಪಟ್ಟಣದ ವಿವಿಧ ಸಮಾಜಗಳ ಮುಖಂಡರು, ಗಣೇಶ ಉತ್ಸವ ಸಮಿತಿಗಳ ಪದಾಧಿಕಾರಿಗಳು, ಸಾರ್ವಜನಿಕರು, ಕೆಂಭಾವಿ ವ್ಯಾಪ್ತಿಯ ವಿವಿಧ ಗ್ರಾಮಗಳ ಯುವಕರು ಹಾಗೂ ಮುಖಂಡರು ಮತ್ತು ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button