ಕಲಬುರಗಿರಾಜ್ಯ

ಬೆಳೆ ಸಮೀಕ್ಷೆ ವರದಿ ಅವೈಜ್ಞಾನಿಕ: ಬಿ.ಆರ್. ಪಾಟೀಲ

ಕಲಬುರಗಿ, ಸೆ.13: ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯಡಿ ಬೆಳೆ ನಷ್ಟದ ಸಮೀಕ್ಷೆ ನಡೆಸುವಾಗ ಅಧಿಕಾರಿಗಳು ತಮಗೆ ಇಷ್ಟವಾದ ಹೊಲಗಳನ್ನು ಆಯ್ಕೆ ಮಾಡಿಕೊಂಡು ಅವೈಜ್ಞಾನಿಕವಾಗಿ ವರದಿ ಸಲ್ಲಿಸುತ್ತಿರುವುದು ಗಂಭೀರ ಸಮಸ್ಯೆಯಾಗಿದೆ ಎಂದು ಯೋಜನೆ, ನೀತಿ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ ಆರೋಪಿಸಿದರು.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಬಾರಿ ಮುಂಗಾರು ವಿಳಂಬವಾಗಿರುವುದರಿಂದ ಜೂನ್‌ನಲ್ಲಿ ನಡೆಯಬೇಕಿದ್ದ ಬಿತ್ತನೆ ಸೆಪ್ಟೆಂಬರ್‌ನಲ್ಲಿಯೂ ಪೂರ್ಣಗೊಂಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬೆಳೆ ನಷ್ಟದ ವೈಜ್ಞಾನಿಕ ಸಮೀಕ್ಷೆ ನಡೆಸುವುದು ಅತ್ಯಂತ ಅಗತ್ಯ. ಆದರೆ ಸಮೀಕ್ಷೆ ಹಾಗೂ ವರದಿ ತಯಾರಿಕೆಯಲ್ಲಿ ಲೋಪವಾಗುತ್ತಿದೆ’ ಎಂದರು.

ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯು ರೈತರನ್ನು ಬೆಳೆ ನಷ್ಟದಿಂದ ರಕ್ಷಿಸಿ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶ ಹೊಂದಿದೆ. ಆದರೆ ಪ್ರಸಕ್ತ ಪರಿಸ್ಥಿತಿಯಲ್ಲಿ ರೈತರು ತಮ್ಮ ಹಕ್ಕಿನ ಬೆಳೆ ವಿಮೆ ಪಡೆಯಲು ಹರಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘2025–26ನೇ ಸಾಲಿನಲ್ಲಿ ಬೆಳೆ ವಿಮೆ ಮಾಡಿಸಿದ ರೈತರ ಬೆಳೆ ಹಾನಿಯಾದ ಸಂದರ್ಭದಲ್ಲಿ ವಿಮಾ ಕಂಪನಿಗಳು ಹಾಗೂ ಸಂಬಂಧಿಸಿದ ಇಲಾಖೆಗಳು ತಾವೇ ಬೆಳೆ ಕಟಾವು ಪ್ರಯೋಗ ನಡೆಸುವ ರೈತರ ಜಮೀನುಗಳನ್ನು ಆಯ್ಕೆ ಮಾಡಿಕೊಳ್ಳುತ್ತಿವೆ. ರೈತರಿಗೆ ಯಾವುದೇ ಮಾಹಿತಿ ನೀಡದೆ ಏಕಪಕ್ಷೀಯವಾಗಿ ಮತ್ತು ಅವೈಜ್ಞಾನಿಕವಾಗಿ ಬೆಳೆ ಕಟಾವು ವರದಿ ಸಲ್ಲಿಸಿರುವುದು ಗಮನಕ್ಕೆ ಬಂದಿದೆ’ ಎಂದು ಹೇಳಿದರು.

ಇದರಿಂದ ಆಳಂದ ತಾಲ್ಲೂಕಿನ ಸುಮಾರು ಆರು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ರೈತರು ಬೆಳೆ ಹಾನಿಯಿಂದ ನಷ್ಟ ಅನುಭವಿಸಿದ್ದರೂ, ಅವೈಜ್ಞಾನಿಕ ಬೆಳೆ ಕಟಾವು ವರದಿಯಿಂದಾಗಿ ಎರಡನೇ ಕಂತಿನ ಬೆಳೆ ವಿಮೆ ಪರಿಹಾರದಿಂದ ವಂಚಿತರಾಗುವ ಆತಂಕ ಎದುರಾಗಿದೆ ಎಂದರು.

‘ಜಿಲ್ಲಾಡಳಿತ ಹಾಗೂ ವಿಮಾ ಕಂಪನಿಗಳು ಈ ವರದಿಗಳನ್ನು ಪುನರ್‌ ಪರಿಶೀಲಿಸಬೇಕು. ಸಂಬಂಧಪಟ್ಟ ರೈತರ ಅಹವಾಲುಗಳನ್ನು ಆಲಿಸಿ, ನೋಂದಾಯಿತ ರೈತರಿಗೆ ಸೂಕ್ತ ಬೆಳೆ ವಿಮೆ ಪರಿಹಾರವನ್ನು ವಿಳಂಬವಿಲ್ಲದೆ ನೀಡಬೇಕು’ ಎಂದು ಒತ್ತಾಯಿಸಿದರು.

ಗ್ರಾಮಸಭೆಯಲ್ಲೇ ನಿರ್ಧಾರ

ಅವೈಜ್ಞಾನಿಕ ಬೆಳೆ ಸಮೀಕ್ಷೆಯನ್ನು ತಕ್ಷಣ ಸ್ಥಗಿತಗೊಳಿಸಿ, ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮಸಭೆ ನಡೆಸಬೇಕು. ಯಾವ ಜಮೀನಿನಲ್ಲಿ ಬೆಳೆ ಕಟಾವು ಪ್ರಯೋಗ ನಡೆಸಲಾಗುತ್ತದೆ ಎಂಬುದನ್ನು ರೈತರ ಸಮ್ಮುಖದಲ್ಲೇ ನಿರ್ಧರಿಸಬೇಕು. ಬೆಳೆ ಕಟಾವು ಪ್ರಯೋಗದ ಕುರಿತು ರೈತರಿಗೆ ಮುಂಚಿತವಾಗಿ ಮಾಹಿತಿ ನೀಡಿ, ಅವರ ಸಮ್ಮುಖದಲ್ಲೇ ಪಾರದರ್ಶಕವಾಗಿ ಸಮೀಕ್ಷೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.

ಬೆಳೆ ಕಟಾವು ಸಮೀಕ್ಷೆಯನ್ನು ತಾಲ್ಲೂಕು ಕೃಷಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿ ಹಾಗೂ ವಿಮಾ ಕಂಪನಿಯ ಪ್ರತಿನಿಧಿಗಳು ನಡೆಸುತ್ತಿದ್ದಾರೆ. ಆದರೆ ವರದಿ ಸಲ್ಲಿಸುವಾಗ ಹಿಂದಿನ ಏಳು ವರ್ಷಗಳ ಇಳುವರಿಯ ಸರಾಸರಿ ಆಧಾರವಾಗಿಸಿಕೊಂಡು ಅವೈಜ್ಞಾನಿಕ ವರದಿ ನೀಡಲಾಗುತ್ತಿದೆ. ಇದರಿಂದ ನೋಂದಾಯಿತ ರೈತರಿಗೆ ಪ್ರಸಕ್ತ ಸಾಲಿನ ಬೆಳೆ ಹಾನಿಗೆ ಸೂಕ್ತ ಪರಿಹಾರ ದೊರೆಯುತ್ತಿಲ್ಲ ಎಂದು ಅವರು ದೂರಿದರು.

ಸರ್ಕಾರ ಕೂಡಲೇ ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯ ಬೆಳೆ ಸಮೀಕ್ಷೆ ಹಾಗೂ ಬೆಳೆ ವಿಮೆ ಪರಿಹಾರ ನಿರ್ಧರಿಸುವ ಪ್ರಕ್ರಿಯೆಯಲ್ಲಿ ತಿದ್ದುಪಡಿ ತರಬೇಕು. ರೈತರು ಯಾವ ವರ್ಷ ಬೆಳೆ ವಿಮೆ ಕಂತು ಪಾವತಿಸಿ ನಷ್ಟ ಅನುಭವಿಸುತ್ತಾರೋ, ಆ ವರ್ಷದ ವಾಸ್ತವಿಕ ಇಳುವರಿಯನ್ನು ಆಧರಿಸಿಯೇ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದರು.

ಖಾಸಗಿ ಕಂಪನಿಗಳಿಗೆ ವಹಿಸುವುದು ಸೂಕ್ತವಲ್ಲ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯ ಅನುಷ್ಠಾನವನ್ನು ಖಾಸಗಿ ಕಂಪನಿಗಳಿಗೆ ವಹಿಸಿರುವುದು ಸೂಕ್ತವಲ್ಲ. ವಿಮಾ ಯೋಜನೆ ನಿರ್ವಹಿಸುವ ಕೆಲವು ಕಂಪನಿಗಳ ಸಿಬ್ಬಂದಿಗೆ ಕೃಷಿ ಕ್ಷೇತ್ರದ ಸೂಕ್ತ ಪರಿಣತಿ ಇಲ್ಲದಿರುವುದು ಕಂಡುಬಂದಿದೆ. ರೈತರ ಸೇವೆಗಿಂತ ಕಂಪನಿಗಳ ಲಾಭಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂಬ ಆರೋಪಗಳಿವೆ ಎಂದು ಪಾಟೀಲ ಹೇಳಿದರು.

ಯೋಜನೆಯನ್ನು ಮುಂದಿನ ದಿನಗಳಲ್ಲಿ ಕೃಷಿ ಇಲಾಖೆ ಹಾಗೂ ಸರ್ಕಾರಿ ವಿಮಾ ಸಂಸ್ಥೆಗಳ ಮೂಲಕವೇ ಅನುಷ್ಠಾನಗೊಳಿಸಬೇಕು. ಬೆಳೆ ಕಟಾವು ಪ್ರಯೋಗವನ್ನು ಪರಿಣತ ಅಧಿಕಾರಿಗಳಿಂದ ವೈಜ್ಞಾನಿಕ ಹಾಗೂ ಪಾರದರ್ಶಕವಾಗಿ ನಡೆಸಿ, ನೋಂದಾಯಿತ ರೈತರಿಗೆ ಸೂಕ್ತ ಪರಿಹಾರ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಬೆಳೆ ಕಟಾವು ಸಮೀಕ್ಷೆಯನ್ನು ರೈತರು ಹಾಗೂ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿಗಳ ಸಮ್ಮುಖದಲ್ಲಿ ನಡೆಸಬೇಕು. ಪ್ರತಿ ಗ್ರಾಮ ಪಂಚಾಯಿತಿಗೊಂದು ರೈತ ಮಾಹಿತಿ ಕೇಂದ್ರ ಆರಂಭಿಸಬೇಕು. ಇದರಿಂದ ರೈತರಲ್ಲಿ ಯೋಜನೆಯ ಬಗ್ಗೆ ವಿಶ್ವಾಸ ಹೆಚ್ಚಿಸಿ, ಅವರ ಹಕ್ಕುಗಳನ್ನು ರಕ್ಷಿಸಲು ಸಾಧ್ಯವಾಗುತ್ತದೆ. ಸರ್ಕಾರ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

Related Articles

Leave a Reply

Your email address will not be published. Required fields are marked *

Back to top button